ಮಕ್ಕಳಿಗೆ ಹಾಲುಣಿಸುವುದಕ್ಕೆ ಪ್ರತ್ಯೇಕ ಜಾಗ ಮೀಸಲಿಡಿ: ಐವಾನ್ ಡಿಸೋಜ

ಬೆಂಗಳೂರು, ಜೂ.15: ಕೆಲಸ ಮಾಡುವ ಜಾಗಗಳಲ್ಲಿ ಬಾಣಂತಿ ಸ್ತ್ರೀಯರು ತಮ್ಮ ಮಕ್ಕಳಿಗೆ ಹಾಲುಣಿಸಲು ಅನುಕೂಲವಾಗುವಂತೆ ಪ್ರತ್ಯೇಕವಾದ ಜಾಗವನ್ನು ಮೀಸಲಿಡಬೇಕು ಎಂದು ವಿಧಾನಪರಿಷತ್‌ನ ಆಡಳಿತ ಪಕ್ಷದ ಮುಖ್ಯ ಸಚೇತಕ ಐವಾನ್ ಡಿಸೋಜ ತಿಳಿಸಿದ್ದಾರೆ.
ಗುರುವಾರ ವಿಧಾನಪರಿಷತ್‌ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತ ವಿಶೇಷ ಚರ್ಚೆಯ ವೇಳೆ ಮಾತನಾಡಿದ ಅವರು, ಇವತ್ತಿನ ದಿನಗಳಲ್ಲಿ ಹೆರಿಗೆಯಾದ ಕೇವಲ ನಾಲ್ಕು ತಿಂಗಳಿಗೆಲ್ಲ ಬಾಣಂತಿಯರು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯಿದೆ. ಇಂತಹ ಸಮಯದಲ್ಲಿ ತಮ್ಮ ಮಕ್ಕಳಿಗೆ ಹಾಲುಣಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ತಾಯಿ ಹಾಲಿನಿಂದ ವಂಚಿತವಾದ ಮಕ್ಕಳು ಅಪೌಷ್ಟಿಕತೆಯಿಂದ ನರಳುವಂತಾಗಿದೆ ಎಂದು ವಿಷಾದಿಸಿದರು.
ಕಟ್ಟಡ ಕಾರ್ಮಿಕ ಮಹಿಳೆಯರು ಸೇರಿದಂತೆ ಖಾಸಗಿ ಕಚೇರಿಗಳಲ್ಲಿ ಬಾಣಂತನ ಅವಧಿಯಲ್ಲಿರುವ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಬೇಕಾಗಿದೆ. ಹೀಗಾಗಿ ಸರಕಾರ ಕಾನೂನು ತಿದ್ದುಪಡಿ ತಂದು ಕೆಲಸ ಮಾಡುವ ಜಾಗದಲ್ಲಿ ಹಾಲುಣಿಸುವುದಕ್ಕಾಗಿ ಪ್ರತ್ಯೇಕವಾದ ಜಾಗವನ್ನು ಕಾಯ್ದಿರಿಸುವ ವ್ಯವಸ್ಥೆಗೆ ಅನವು ಮಾಡಿಕೊಡಬೇಕೆಂದು ಅವರು ಹೇಳಿದರು.





