ಕೆ.ಜೆ.ಜಾರ್ಜ್-ಜಗದೀಶ್ ಶೆಟ್ಟರ್ ವಾಗ್ವಾದ

ಬೆಂಗಳೂರು, ಜೂ.15: ಐಎಎಸ್ ಅಧಿಕಾರಿ ಡಿ.ಕೆ.ರವಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಾಗೂ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಗುರುವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕೆ.ಜೆ.ಜಾರ್ಜ್, ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ನಾನು ಗೃಹ ಸಚಿವನಾಗಿದ್ದೆ. ಘಟನೆ ನಡೆದ 7 ದಿನಗಳಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಉದಾಹರಣೆ ಇಡೀ ದೇಶದಲ್ಲಿ ಎಲ್ಲಿಯೂ ಇಲ್ಲ ಎಂದರು.
ಈ ಪ್ರಕರಣದಲ್ಲಿ ನನ್ನ ಹೆಸರನ್ನು ಅನಗತ್ಯವಾಗಿ ಪ್ರಸ್ತಾಪಿಸಿ, ಸದನದ ಒಳಗೆ ಹಾಗೂ ಹೊರಗೆ ಗಂಭೀರ ಆರೋಪಗಳನ್ನು ಮಾಡಲಾಯಿತು. ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಯಿತು. ಆದರೆ, ಸಿಬಿಐ ತನಿಖೆ ಸಂದರ್ಭದಲ್ಲಿ ಯಾರೊಬ್ಬರೂ ಅಧಿಕಾರಿಗಳ ಎದುರು ಹಾಜರಾಗಿ ನನ್ನ ವಿರುದ್ಧ ಮಾಡಿದ ಆರೋಪಗಳಿಗೆ ಸಾಕ್ಷಾಧಾರಗಳನ್ನು ನೀಡಿಲ್ಲ ಎಂದು ಅವರು ಹೇಳಿದರು.
ತನಿಖೆ ನಡೆದು ನನ್ನ ಯಾವುದೇ ತಪ್ಪಿಲ್ಲ ಎಂದು ಸಾಬೀತಾದರೂ, ಕನಿಷ್ಠ ಪಕ್ಷ ನನ್ನ ವಿರುದ್ಧ ಮಾಡಿದ ಸುಳ್ಳು ಆಪಾದನೆಗಳಿಗೆ ವಿಷಾದವನ್ನು ವ್ಯಕ್ತಪಡಿಸಿಲ್ಲ ಎಂದು ಜಾರ್ಜ್ ನುಡಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ಕೆ.ಎನ್.ರಾಜಣ್ಣ, ಈ ಹಿಂದೆ ನೀವೇ ಸದನದಲ್ಲಿ ಹೇಳಿಕೆ ನೀಡಿದ್ದೀರಾ, ‘ನಾನು ಜಾರ್ಜ್, ನೀವು ಜಗದೀಶ್ ಶೆಟ್ಟರ್’ ಅದಕ್ಕಾಗಿ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದವರನ್ನು ಕೆಣಕಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಡಿ.ಕೆ.ರವಿ ಪ್ರಕರಣದ ತನಿಖಾ ವರದಿಯನ್ನು ಪ್ರಸ್ತಾಪ ಮಾಡುವ ಜಾರ್ಜ್, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಕುರಿತು ಏನು ಹೇಳುತ್ತಾರೆ. ಸಿಐಡಿಯಿಂದ ತರಾತುರಿಯಲ್ಲಿ ಕ್ಲೀನ್‌ಚಿಟ್ ಪಡೆಯಲಾಗಿದೆ. ಆದರೆ, ನ್ಯಾಯಾಂಗ ತನಿಖೆಯ ಪ್ರಗತಿ ಏನಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದರು.
ಮಾಜಿ ಸಚಿವ ಎಚ್.ವೈ.ಮೇಟಿ ಪ್ರಕರಣದಲ್ಲಿಯೂ ಸಿಐಡಿ ಮೂಲಕ ಕ್ಲೀನ್‌ಚಿಟ್ ಕೊಡಿಸಲಾಗಿದೆ. ಯಾವ ಪ್ರಕರಣದಲ್ಲಿ ಯಾವ ರೀತಿಯ ವರದಿ ಬಂದಿದೆ ಎಂಬುದು ನಮಗೂ ಗೊತ್ತಿದೆ ಎಂದು ಜಗದೀಶ್ ಶೆಟ್ಟರ್ ತಿರುಗೇಟು ನೀಡಿದರು. ಕೆಲಕಾಲ ಸದನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿಯು ನಡೆಯಿತು. ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ ಪರಿಸ್ಥಿತಿ ತಿಳಿಗೊಳಿಸಿದರು.







