ಭಟ್ಕಳ: ಎಟಿಎಂ.ನಿಂದ ಹಣ ಕಳವು ಮಾಡಲು ವಿಫಲ ಯತ್ನ

ಭಟ್ಕಳ,ಜೂ.15: ನಗರದ ರಂಗೀಕಟ್ಟೆಯ ನ್ಯಾಯಾಲಯದ ಹತ್ತಿರದಲ್ಲಿಯೇ ಇರುವ ಕೆನರಾ ಬ್ಯಾಂಕ್‌ಗೆ ಸೇರಿದ ಎಟಿಎಂ ನಿಂದ ಹಣ ಕಳವು ಮಾಡಲು ವಿಫಲ ಯತ್ನ ನಡೆಸಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ಗುರುವಾರ ಬೆಳಗಿನ ಜಾವದ ಸುಮಾರು 3 ಗಂಟೆಯ ಸಮಯ ಎಟಿಎಂ ಶೆಟರ್ ಹಾಕಿದ್ದು, ಒಳಗಡೆ ಏನೋ ಸದ್ದು ಕೇಳಿಸುತ್ತಿರುವುದನ್ನು ತಿಳಿದ ಬೈಕಿನಲ್ಲಿ ಹೋಗುತ್ತಿದ್ದ ಸ್ಥಳೀರು ಗಮನಿಸಿ ತಕ್ಷಣ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸುವುದರೊಳಗಾಗಿ ಕಳ್ಳರು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಾವಲುಗಾರನಿಲ್ಲದ ಎ.ಟಿ.ಎಂ. ಒಳ ಹೊಕ್ಕ ಕಳ್ಳರು ತಕ್ಷಣ ಶೆಟರ್ ಹಾಕಿಕೊಂಡಿದ್ದಾರೆ, ಮೊದಲೇ ಪ್ಲಾನ್ ಮಾಡಿದ್ದ ಅವರು ಯಾವುದೋ ಒಂದು ವಸ್ತುವಿನಿಂದ ಎ.ಟಿ.ಎಂ. ಹೊರಗಡೆ ಹಾಕಿದ್ದ ಸಿ.ಸಿ. ಕ್ಯಾಮರಾವನ್ನು ಕಿತ್ತು ಹಾಕಿಕೊಂಡಿದ್ದು ಹೊರಗಡೆ ಅಳವಡಿಸಿದ್ದ ಸೈರನ್ ವಯರ್ ಕೂಡಾ ತುಂಡರಿಸಲಾಗಿದೆ. ಸೈರನ್ ವಯರ್ ತುಂಡಾದ ತಕ್ಷಣ ಸೈರನ್ ಮೊಳಗಬೇಕಾಗಿದ್ದರೂ ಕೂಡಾ ಸೈರನ್ ಮೊಳಗದೇ ಇರುವುದು ಕಾರಣ ಎನೆಂದು ತಿಳಿದು ಬಂದಿಲ್ಲ.
ಈ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು ಅಪರಾಧ ವಿಭಾಗದ ಪಿ.ಎಸ್.ಐ. ಪರಮೇಶ್ವರಪ್ಪ ಸೇಠ್‌ಸನದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಕಾರವಾರದಿಂದ ಬಂದಿದ್ದ ಬೆರಳಚ್ಚು ತಜ್ಞರು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ.







