ಪದವಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಬೆಂಗಳೂರು, ಜೂ. 15: ಮ್ಯಾಗ್ಮಾ ಫಿನ್‌ಕಾರ್ಪ್ ಲಿಮಿಟೆಡ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಪದವಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.
ಎಂ ಸ್ಕಾಲರ್ ಹೆಸರಿನಡಿಯಲ್ಲಿ ವಿದ್ಯಾರ್ಥಿ ವೇತನ ನೀಡುತ್ತಿದ್ದ ಆರ್ಥಿಕ ಸಮಸ್ಯೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ 2015 ರಿಂದ ವಿದ್ಯಾರ್ಥಿ ವೇತನ ನೀಡುತ್ತಿದೆ. ಈಗಾಗಲೇ 39 ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 99 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿದ್ದಾರೆ.
ಪ್ರಸಕ್ತ ವರ್ಷದಲ್ಲಿ ದೇಶದಾದ್ಯಂತ ನೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಸಂಸ್ಥೆ ನಿರ್ಧರಿಸಿಕೊಂಡಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಮೂರು ವರ್ಷಗಳ ಅವಧಿವರೆಗೂ ನೀಡಲಾಗುತ್ತದೆ. ಪ್ರತಿ ವರ್ಷ ಪರೀಕ್ಷೆಯಲ್ಲಿನ ಗ್ರೇಡ್ ಆಧರಿಸಿ ನವೀಕರಿಸಲಾಗುತ್ತದೆ ಎಂದು ಆಡಳಿತ ವಿಭಾಗದ ಉಪಾಧ್ಯಕ್ಷ ಕೌಶಿಕ್ ಸಿನ್ಹಾ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರು ಭಾರತದ ನಾಗರಿಕನಾಗಿರಬೇಕು. ಗರಿಷ್ಠ 20 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಭಾಗದ 3 ವರ್ಷಗಳ ಪದವಿ ಕೋರ್ಸ್‌ಗಳಲ್ಲಿ ಅಥವಾ ವೃತ್ತಿಪರ, ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು ಮುಂತಾದ ವಿಶೇಷ ಪದವಿ ಕೋರ್ಸ್‌ಗಳಲ್ಲಿ 4 ವರ್ಷಗಳ ಕಾಲ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ರಾಜ್ಯ ಪರೀಕ್ಷಾ ಮಂಡಳಿಯಿಂದ ನಡೆಸುವ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.80 ರಷ್ಟು ಅಂಕಗಳಿಸಿರಬೇಕು. ಮಾಸಿಕ 10 ಸಾವಿರ ಆದಾಯವಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದರು.
ಅರ್ಜಿ ಸಲ್ಲಿಸುವವರು ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಅರ್ಜಿ ಪತ್ರ, ಪಿಯುಸಿ ಅಂಕಪಟ್ಟಿ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಯಸ್ಸಿನ ಆಧಾರ(ಶಾಲಾ ಪ್ರಮಾಣಪತ್ರ/ದಾಖಲಾತಿ ಪತ್ರ), ವಿಳಾಸ ಮತ್ತು ವ್ಯಕ್ತಿತ್ವದ ಖಾತ್ರಿ, ಆದಾಯದ ಪ್ರಮಾಣಪತ್ರ, ಕಾಲೇಜು ಪ್ರವೇಶ ಪಡೆದ ಖಾತ್ರಿ, ಬ್ಯಾಂಕ್ ಖಾತೆಯ ವಿವರಗಳು, ಹಿಂದಿನ ಶಾಲೆಯಿಂದ ಪಡೆದ ನಡವಳಿಕೆ ಅಥವಾ ವ್ಯಕ್ತಿತ್ವದ ಪ್ರಮಾಣ ಪತ್ರ ನೀಡಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ : ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಡಿಪಾರ್ಟ್‌ಮೆಂಟ್, ಮ್ಯಾಗ್ಮಾ ಫಿನ್‌ಕಾರ್ಪ್ ಲಿಮಿಟೆಡ್, ಮ್ಯಾಗ್ಮಾ ಹೌಸ್, 10ನೆ ಮಹಡಿ, 24 ಪಾರ್ಕ್ ಸ್ಟ್ರೀಟ್, ಕೊಲ್ಕತ್ತಾ-700016. ಪಶ್ಚಿಮ ಬಂಗಾಳ. ಹೆಚ್ಚಿನ ಮಾಹಿತಿಗಾಗಿ 91 7044033714 ಹಾಗೂ 033 44017469 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.







