ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ: ಶಿವಲಿಂಗೇಗೌಡ ಆಗ್ರಹ
ಬೆಂಗಳೂರು, ಜೂ. 15: ಸರಕಾರಿ ಆಡಳಿತ ಯಂತ್ರಾಂಗ ಕುಸಿತಕ್ಕೆ ಮೂಲ ಕಾರಣವಾಗಿರುವ ಹೊರಗುತ್ತಿಗೆ ಪದ್ದತಿಯನ್ನು ಕೂಡಲೇ ರದ್ದುಪಡಿಸಿ ಎಲ್ಲ ಇಲಾಖೆಯಲ್ಲಿಯೂ ಖಾಯಂ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಸದಸ್ಯ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೊರಗುತ್ತಿಗೆ ಪದ್ಧತಿಯಿಂದ ಜನಸಾಮಾನ್ಯರಿಗೆ ಉತ್ತಮ ಸರಕಾರಿ ಸೇವೆ ಸಿಗುತ್ತಿಲ್ಲ. ಅಲ್ಲದೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರಿಗೆ ಕಂಪೆನಿಗಳಿಂದ ಶೋಷಣೆಯಾಗುತ್ತಿದೆ ಎಂದು ವಿವರಿಸಿದರು.
ಬಯಲು ಸೀಮೆ ಜನರಿಗೆ ಕುಡಿಯುವ ನೀರು ಒದಗಿಸುವ ದೃಷ್ಟಿಯಿಂದ ಎತ್ತಿನಹೊಳೆ ಯೋಜನೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ ಅವರು, ಬರ ಪೀಡಿತ ಪ್ರದೇಶಗಳಲ್ಲಿ ಅಂತರ್ಜಲ ವೃದ್ದಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸ್ಮಶಾನಗಳಂತಿರುವ ಸರಕಾರಿ ಶಾಲೆಗಳನ್ನು ಸುಸ್ಥಿತಿಯಲ್ಲಿ ಇರಿಸಲು ಅವುಗಳಿಗೆ ಸುಣ್ಣ-ಬಣ್ಣ ಮಾಡಲು ಅಗತ್ಯ ನೆರವು ನೀಡಬೇಕು.
ಅಲ್ಲದೆ, ಹೊಸ ಶಾಲಾ ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕೆಂದ ಅವರು, ಶಾಲೆ ಆರಂಭದಲ್ಲೆ ಪಠ್ಯ-ಪುಸ್ತಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಬೆಂಗಳೂರಿನಲ್ಲಿರುವ ಸಿದ್ಧ ಉಡುಪು ಕಾರ್ಖಾನೆಗಳನ್ನು ಜಿಲ್ಲಾ, ತಾಲೂಕು ಹಾಗೂ ಹೋಬಳಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಇದರಿಂದ ಬೆಂಗಳೂರು ಬೆಳೆಯುವುದು ತಪ್ಪುತ್ತದೆ. ಮಾತ್ರವಲ್ಲ ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ನೆರವು ದೊರೆಯಲಿದೆ ಎಂದು ಮನವಿ ಮಾಡಿದರು.







