ಪಾಕ್‌ನ ಉದಯೋನ್ಮುಖ ಬೌಲರ್ ಹಸನ್ ಅಲಿ

ಲಂಡನ್, ಜೂ.15: ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಯುವ ಆಟಗಾರ ಹಸನ್ ಅಲಿ ಮುಂಬರುವ ವರ್ಷಗಳಲ್ಲಿ ಪಾಕಿಸ್ತಾನದ ಪ್ರಮುಖ ಆಟಗಾರನಾಗಿ ಹೊರಹೊಮ್ಮುವ ಸೂಚನೆ ನೀಡಿದ್ದಾರೆ. ವಿವಿಧ ಶೈಲಿಯಲ್ಲಿ ಬೌಲಿಂಗ್ ಮಾಡಬಲ್ಲ ಅಲಿ ಉತ್ತಮ ಫೀಲ್ಡರ್ ಆಗಿದ್ದು, ಪಾಕ್ ತಂಡದಲ್ಲಿರುವ ಓರ್ವ ಅತ್ಯುತ್ತಮ ಆಟಗಾರನಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪಾಕ್ ಆಡಿದ್ದ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ 10 ಓವರ್‌ಗಳಲ್ಲಿ 70 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡಿದ್ದ ಅಲಿ ಆ ನಂತರ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ 24 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿ ಮೊದಲಿನ ಲಯಕ್ಕೆ ಮರಳಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಮತ್ತೊಮ್ಮೆ 3 ವಿಕೆಟ್‌ಗಳನ್ನು ಉಡಾಯಿಸಿ ಪಾಕಿಸ್ತಾನ ತಂಡವನ್ನು ಸೆಮಿಫೈನಲ್‌ಗೆ ತಲುಪಿಸಿದ್ದರು.
ಟೂರ್ನಿಯ ಫೇವರಿಟ್ ಆಗಿ ಗುರುತಿಸಿಕೊಂಡಿದ್ದ ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಮುಖ ವೇಗದ ಬೌಲರ್ ಮುಹಮ್ಮದ್ ಆಮಿರ್ ಅನುಪಸ್ಥಿತಿಯಲ್ಲಿ ಪಾಕ್ ಬೌಲಿಂಗ್ ದಾಳಿಯ ನೇತೃತ್ವ ವಹಿಸಿದ್ದ ಅಲಿ ಸೋಫಿಯಾ ಗಾರ್ಡನ್‌ನ ಸ್ಲೋ-ಪಿಚ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಮೊದಲಿಗೆ ಜಾನಿ ಬೈರ್‌ಸ್ಟೋವ್ ವಿಕೆಟ್ ಪಡೆದಿದ್ದ ಅಲಿ ತನ್ನ ಎರಡನೆ ಸ್ಪೆಲ್‌ನಲ್ಲಿ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ವಿಕೆಟ್ ಕಬಳಿಸಿದ್ದರು. ಬೆನ್ ಸ್ಟೋಕ್ಸ್ ವಿಕೆಟ್‌ನ್ನು ಪಡೆದು ಇಂಗ್ಲೆಂಡ್‌ನ ಬ್ಯಾಟಿಂಗ್ ಬೆನ್ನಲುಬು ಮುರಿದಿದ್ದ ಅಲಿ 10 ಓವರ್‌ಗಳಲ್ಲಿ ಕೇವಲ 35 ರನ್ ನೀಡಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು.
ಹಸನ್ ಅಲಿ ಟೂರ್ನಿಯಲ್ಲಿ ಈತನಕ ಒಟ್ಟು 10 ವಿಕೆಟ್‌ಗಳನ್ನು ಪಡೆದು ಗರಿಷ್ಠ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಪರ ಉತ್ತಮ ಪ್ರದರ್ಶನ ನೀಡಿದ ಬೌಲರ್ ಆಗಿದ್ದಾರೆ.
ಹಸನ್ ಅಲಿ 20 ಏಕದಿನ ಪಂದ್ಯಗಳಲ್ಲಿ 8ನೆ ಬಾರಿ ಮೂರು ವಿಕೆಟ್ ಗೊಂಚಲು ಪಡೆದಿದ್ದಾರೆ. ಅಲಿ ಏಕದಿನಕ್ಕೆ ಪಾದಾರ್ಪಣೆಗೈದ ಬಳಿಕ ಪಾಕ್‌ನ ಉಳಿದ ಬೌಲರ್‌ಗಳು ಒಟ್ಟಿಗೆ ಏಳು ಬಾರಿ ಮೂರು ವಿಕೆಟ್ ಗೊಂಚಲು ಪಡೆದಿದ್ದಾರೆ.
‘‘ನಾನು ದಕ್ಷಿಣ ಆಫ್ರಿಕ ವಿರುದ್ಧ ಹೇಗೆ ಬೌಲಿಂಗ್ ಮಾಡಿದ್ದೇನೋ ಅದೇ ರೀತಿ ಇಂಗ್ಲೆಂಡ್ ವಿರುದ್ಧ ಬೌಲಿಂಗ್ ಮಾಡಿದ್ದೆ. ಭಾರತ ವಿರುದ್ಧದ ಪಂದ್ಯದಲ್ಲಿ ಕೊನೆಯ 3 ಓವರ್‌ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿರಲಿಲ್ಲ. ಬೌಲಿಂಗ್ ಕೋಚ್ ಅಝರ್ ಮಹಮೂದ್ ಮಾರ್ಗದರ್ಶನದಲ್ಲಿ ನನ್ನ ಯೋಜನೆಯಂತೆ ಬೌಲಿಂಗ್ ಮಾಡಿ ಯಶಸ್ಸು ಸಾಧಿಸಿದ್ದೇನೆ’’ ಎಂದು ಹಸನ್ ಅಲಿ ಹೇಳಿದ್ದಾರೆ.







