ಸ್ಟಟ್‌ಗರ್ಟ್ ಟೆನಿಸ್ ಟೂರ್ನಿ: ಫೆಡರರ್‌ಗೆ ಹಾಸ್ ಶಾಕ್

ಸ್ಟಟ್‌ಗರ್ಟ್, ಜೂ.15: ಸುಮಾರು ಮೂರು ತಿಂಗಳ ನಂತರ ಸಕ್ರಿಯ ಟೆನಿಸ್‌ಗೆ ವಾಪಸಾಗಿರುವ ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್ ಟ್ಯಾಮಿ ಹಾಸ್ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದಾರೆ.
ವಿಶ್ವದ ಮಾಜಿ ನಂ.2ನೆ ಆಟಗಾರ ಹಾಸ್ ತನ್ನ ಆತ್ಮೀಯ ಗೆಳೆಯ ಫೆಡರರ್ ವಿರುದ್ಧ 2-6, 7-6(10/8), 6-4 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇದೀಗ 302ನೆ ರ್ಯಾಂಕಿನಲ್ಲಿರುವ ಹಾಸ್ ಅವರು ಫೆಡರರ್ ವಿರುದ್ಧ ಈತನಕ ಆಡಿರುವ 17 ಪಂದ್ಯಗಳ ಪೈಕಿ ನಾಲ್ಕನೆ ಬಾರಿ ಜಯ ಸಾಧಿಸಿದ್ದಾರೆ.
8ನೆ ಬಾರಿ ವಿಂಬಲ್ಡನ್ ಪ್ರಶಸ್ತಿ ಜಯಿಸುವತ್ತ ಚಿತ್ತವಿರಿಸಿರುವ ಫೆಡರರ್ ಕಳೆದ ಮಾರ್ಚ್‌ನಿಂದ ಯಾವುದೇ ಟೆನಿಸ್ ಪಂದ್ಯಗಳನ್ನು ಆಡಿಲ್ಲ. ಇತ್ತೀಚೆಗೆ ಕೊನೆಗೊಂಡಿರುವ ಫ್ರೆಂಚ್ ಓಪನ್‌ನಿಂದ ಹೊರಗುಳಿದಿದ್ದರು.
ಜನವರಿಯಲ್ಲಿ 18ನೆ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಫೆಡರರ್ ಈವರ್ಷ ಎರಡನೆ ಬಾರಿ ಸೋತಿದ್ದಾರೆ.
‘‘ನನಗೆ ಈ ಸೋಲಿನಿಂದ ಆಘಾತವಾಗಿಲ್ಲ. ಟ್ಯಾಮಿ ವಿರುದ್ಧ ಸೋಲುತ್ತೇನೆಂದು ನನಗೆ ಗೊತ್ತಿತ್ತು’’ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ.
39ರ ಹರೆಯದ ಹಾಸ್ ಅಗ್ರ-5ರಲ್ಲಿರುವ ಆಟಗಾರನನ್ನು ಸೋಲಿಸಿರುವ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. 1999ರ ಬಳಿಕ ಫೆಡರರ್‌ರನ್ನು ಮಣಿಸಿದ ಕನಿಷ್ಠ ರ್ಯಾಂಕಿನ ಆಟಗಾರನಾಗಿದ್ದಾರೆ.





