ಸಂಸದ ದಿವಾಕರ್ ರೆಡ್ಡಿಗೆ ಇನ್ನಷ್ಟು ವಿಮಾನ ಕಂಪೆನಿಗಳಿಂದ ಪ್ರಯಾಣ ನಿಷೇಧ!

ವಿಶಾಖಪಟ್ಟಣಂ, ಜೂ. 16: ತಡವಾಗಿ ಬಂದದ್ದಕ್ಕಾಗಿ ವಿಮಾನಕ್ಕೆ ಹತ್ತಲುಬಿಡದ ವಿಮಾನಕಂಪೆನಿ ಉದ್ಯೋಗಿಯನ್ನು ಹಿಡಿದು ದಬ್ಬಿದ ಟಿಡಿಪಿ ಸಂಸದ ಜೆ. ಸಿ. ದಿವಾಕರ್ ರೆಡ್ಡಿಗೆ ಇನ್ನಷ್ಟು ವಿಮಾನಕಂಪೆನಿಗಳು ಪ್ರಯಾಣ ನಿಷೇಧ ಹೇರಿದೆ. ಈ ಮೊದಲು ಇಂಡಿಗೊ, ಏರ್ ಇಂಡಿಯಾ ಕಂಪೆನಿಗಳು ನಿಷೇಧ ಹೇರಿದ್ದವು.
ಈಗ ಸ್ಪೇಸ್ ಜೆಟ್, ಗೋಏರ್, ಜೆಟ್ ಏರ್‌ವೇಸ್, ಮುಂತಾದ ವಿಮಾನ ಕಂಪೆನಿಗಳು ರೆಡ್ಡಿಗೆ ನಿಷೇಧ ಹೇರಿವೆ. ವಿಶಾಖಪಟ್ಟಣಂ ವಿಮಾನನಿಲ್ದಾಣದಲ್ಲಿ ಇಂಡಿಗೊದ ಬೆಳಗ್ಗಿನ 8:10ರ ವಿಮಾನದಲ್ಲಿ ಹೋಗಲು ಕೌಂಟರಿಗೆ ಬಂದ ದಿವಾಕರ ರೆಡ್ಡಿಯೊಂದಿಗೆ ಬೋರ್ಡಿಂಗ್ ಮುಗಿದಿದೆ ಎಂದು ನೌಕರ ಹೇಳಿದ್ದ. ಇದಕ್ಕೆ ಕೋಪ ಗೊಂಡ ರೆಡ್ಡಿ ನೌಕರನನ್ನು ಹಿಡಿದು ದೂಡಿದ್ದಾರೆ. ಕೌಂಟರ್‌ನ ಪ್ರಿಂಟರ್ ನೆಲಕ್ಕೆ ಬಿದ್ದು ಪುಡಿಯಾಗಿತ್ತು. ಇದರ ನಂತರ ಇಂಡಿಗೊ ಮತ್ತುಏರ್ ಇಂಡಿಯ ಪ್ರಯಾಣ ನಿಷೇಧ ಹೇರಿದ್ದವು.
ಸಂಸದ ರೆಡ್ಡಿ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜುರ ತೆಲುಗುದೇಶಂ ಪಾರ್ಟಿಯ ಸದಸ್ಯರಾಗಿದ್ದಾರೆ. ಈ ವರ್ಷ ಶಿವಸೇನೆ ಸಂಸದ ರವೀಂದ್ರ ಗಾಯಕ್‌ವಾಡ್‌ಗೆಏರ್‌ಇಂಡಿಯ ಉದ್ಯೋಗಿಗೆ ಹೊಡೆದದ್ದಕ್ಕಾಗಿ ಕೆಲವು ದಿವಸಗಳವರೆಗೆ ಪ್ರಯಾಣ ನಿಷೇಧ ಹೇರಲಾಗಿತ್ತು. ಈ ಪರಿಸ್ಥಿತಿಯಲ್ಲಿ ಕೆಟ್ಟದಾಗಿ ವರ್ತಿಸುವ ಪ್ರಯಾಣಿಕರನ್ನು ಮೂರು ತಿಂಗಳಿಂದ ಅನಿಶ್ಚಿತ ಅವಧಿಯವರೆಗೆ ನಿಷೇಧಿಸುವ ಕಾನೂನು ನಿರ್ಮಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಕಳೆದ ವರ್ಷ ತಾನು ತಲುಪುವ ಮುಂಚೆ ವಿಮಾನ ಹೊರಟದ್ದಕ್ಕೆ ವಿಜಯವಾಡದ ಗನ್ನಾವಾರಂ ಏರ್‌ಪೋರ್ಟ್‌ನ ಏರ್ ಇಂಡಿಯ ಕಚೇರಿಯನ್ನು ರೆಡ್ಡಿ ಹಾನಿಗೊಳಪಡಿಸಿದ್ದರು.







