ಕಲ್ಲಡ್ಕ ಗಲಭೆ ಪ್ರಕರಣ ಸಮಗ್ರ ತನಿಖೆ: ಎಡಿಜಿಪಿ ಅಲೋಕ್ ಮೋಹನ್
ಮಂಗಳೂರು, ಜೂ.16: ಕಲ್ಲಡ್ಕದಲ್ಲಿ 15 ದಿನಗಳಲ್ಲೇ ಗಲಭೆ ಮರುಕಳಿಸಿರುವುದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪಶ್ಚಿಮ ವಲಯ ಐಜಿಪಿ ಹರಿಶೇಖರನ್‌ಗೆ ಜವಾಬ್ಧಾರಿ ವಹಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಎಡಿಜಿಪಿ) ಅಲೋಕ್ ಮೋಹನ್ ತಿಳಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಗಲಭೆ ಆರಂಭವಾದಾಗಲೇ ಹತ್ತಿಕ್ಕಿ, ಮರುಕಳಿಸದಂತೆ ಪೊಲೀಸರು ಕ್ರಮ ವಹಿಸಬೇಕಿತ್ತು ಎಂದವರು ಅಭಿಪ್ರಾಯಿಸಿದರು.
ಕಲ್ಲಡ್ಕದ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಜಿಲ್ಲಾ ಎಸ್ಪಿ ಸ್ಥಳದಲ್ಲೇ ಮೊಕ್ಕಾಂ ಹೂಡುವಂತೆ ಸೂಚಿಸಲಾಗಿದೆ. ಪೊಲೀಸ್ ಪಡೆ ಸಮರ್ಥವಾಗಿದ್ದು, ದುಷ್ಕರ್ಮಿಗಳನ್ನು ಹತ್ತಿಕ್ಕಲಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಪ್ರಿಯರ ಜಿಲ್ಲೆ. ಇಲ್ಲಿ ಕೇವಲ ಶೇ. ಒಂದರಷ್ಟಿರುವ ಕಿಡಿಗೇಡಿಗಳಿಂದ ಶಾಂತಿಗೆ ತೊಂದರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುವ ವ್ಯಕ್ತಿ, ಸಂಘಟನೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಎಡಿಜಿಪಿ ಅಲೋಕ್ ಮೋಹನ್ ಹೇಳಿದರು.
ಕಲ್ಲಡ್ಕ ಗಲಭೆಗೆ ಸಂಬಂಧಿಸಿ ಈತನಕ 7 ಪ್ರಕರಣ ದಾಖಲಿಸಲಾಗಿದ್ದು, 18 ಮಂದಿಯನ್ನು ಬಂಧಿಸಲಾಗಿದೆ. ಈ ಪ್ರಕರಣದ ಬಗ್ಗೆ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆ ಸಮಗ್ರ ತನಿಖೆ ನಡೆಸುತ್ತಿದ್ದು, ಉಳಿದ ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ವಿಎಚ್‌ಪಿ ಮುಖಂಡ ರತ್ನಾಕರ ಶೆಟ್ಟಿ ಪರಾರಿ ಪ್ರಕರಣದಲ್ಲಿ ಎಸ್‌ಐ ಸೇರಿದಂತೆ ಮೂವರ ಅಮಾನತು ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಲೋಕ್ ಮೋಹನ್, ಈ ಬಗ್ಗೆ ಎಸ್ಪಿ ಭೂಷಣ್ ಗುಲಾಬ್ ರಾವ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಿದ್ದಾರೆ.
ಈ ಸಂದರ್ಭ ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಉಪಸ್ಥಿತರಿದ್ದರು.
ಪರಿಸ್ಥಿತಿ ಅವಲೋಕಿಸಿ ಸೆಕ್ಷನ್ ಬಗ್ಗೆ ನಿರ್ಧಾರ
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಜೂ. 21ರವರೆಗೆ 144 ಸೆಕ್ಷನ್ ವಿಧಿಸಲಾಗಿದೆ. ಪ್ರತಿದಿನ ಪರಿಸ್ಥಿತಿ ಅಲೋಕನ ನಡೆಸಿ ಸೆಕ್ಷನ್ ಬಗ್ಗೆ ನಿರ್ಧರಿಸಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶ ಪೊಲೀಸ್ ಇಲಾಖೆಗಿಲ್ಲ ಎಂದು ಎಡಿಜಿಪಿ ಅಲೋಕ್ ಮೋಹನ್ ಹೇಳಿದರು.







