ಈ ಜಿಲ್ಲಾಧಿಕಾರಿ ಬಾಯಿ ತೆರೆದರೆ ಬೈಗುಳ!
‘‘ನನ್ನ ಸ್ಟೈಲೇ ಹೀಗೆ’’

ಚಂಡಿಗಡ,ಜೂ.16: ಅಭಿವೃದ್ಧಿಯ ವಿಷಯದಲ್ಲಿ ಹರ್ಯಾಣದ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ಮೇವಾತ್‌ನ ಜಿಲ್ಲಾಧಿಕಾರಿ ಮಣಿರಾಮ ಶರ್ಮಾ ತನ್ನ ಭಾಷೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಗುರುವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಕೀಳು ಭಾಷೆಯೆಡೆಗೆ ತನ್ನ ಪ್ರೀತಿಯನ್ನು ಅವರು ಒಪ್ಪಿಕೊಂಡಿದ್ದಾರೆ.
ಪ್ರತಿ ವಾಕ್ಯದಲ್ಲಿಯೂ ತಾನು ಬಳಸುವ 10 ಶಬ್ದಗಳಲ್ಲಿ 8 ಶಬ್ದಗಳು ನಿಂದಾತ್ಮಕ ವಾಗಿರುತ್ತವೆ ಮತ್ತು ತಾನು ತನ್ನ ಭಾಷೆಯನ್ನು ಪ್ರೀತಿಸುತ್ತೇನೆ. ತನ್ನನ್ನು ಒಂದು ಬಾರಿಯಲ್ಲ, ಮೂರು ಬಾರಿ ಆಯ್ಕೆ ಮಾಡಿರುವ ಕೇಂದ್ರ ಲೋಕಸೇವಾ ಆಯೋಗಕ್ಕೆ ನೀವು ಈ ಬಗ್ಗೆ ದೂರು ನೀಡಬಹುದು ಎಂದು ಅವರು ಬರೆದುಕೊಂಡಿದ್ದಾರೆ.
ಶರ್ಮಾರ ಈ ಫೇಸ್‌ಬುಕ್ ಪೋಸ್ಟ್ ಜಿಲ್ಲೆಯಲ್ಲಿ ಬಯಲು ಶೌಚ ಪದ್ಧತಿಯನ್ನು ಅಂತ್ಯಗೊಳಿಸುವ ಅವರ ಅಭಿಯಾನಕ್ಕೆ ಸಂಬಂಧಿಸಿದೆ. ಸಲಾಹೆದಿ ಮತ್ತು ಸಾಂಬಾ ಗ್ರಾಮಗಳಲ್ಲಿ ಬಯಲು ಶೌಚ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸುತ್ತಿರುವ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ. ‘‘ಆಜ್ ಇನ್‌ಕಿ ಅಕಡ್ ಢೀಲಿ ಕರ್ನಿ ಥಿ ಔರ್ ತಸಲ್ಲಿ ಸೆ ಕರ್ ಭೀ ದೀ(ಇಂದು ಈ ಜನರಿಗೆ ಪಾಠ ಕಲಿಸುವ ಅಗತ್ಯವಿತ್ತು ಮತ್ತು ಅದನ್ನು ಸೂಕ್ತವಾಗಿ ಮಾಡಲಾಗಿದೆ)’’ ಎಂಬ ಅಡಿಬರಹವನ್ನೂ ಚಿತ್ರದೊಂದಿಗೆ ಲಗತ್ತಿಸಿದ್ದಾರೆ. ಈ ಜನರು ತಮ್ಮ ಪ್ರಭಾವವನ್ನು ಬಳಸಿಕೊಂಡು ನಿಯಮಗಳನ್ನು ಉಲ್ಲಂಘಿಸುತ್ತಿದ್ದರು ಎಂದೂ ಅವರು ಬರೆದಿದ್ದಾರೆ.
ಬಯಲು ಶೌಚ ಮಾಡುವರ ನಮಾಜ್ ಮತ್ತು ರೋಝಾವನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಒಂದೆಡೆ ಅವರು ಹೇಳುತ್ತಾರೆ ಮತ್ತು ಈ ಜನರು ರಮಝಾನ್ ತಿಂಗಳಲ್ಲಿಯೇ ಈ ಕೃತ್ಯವನ್ನು ಮಾಡುತ್ತಿದ್ದಾರೆ ಎಂದೂ ಶರ್ಮಾ ಕಿಡಿಕಾರಿದ್ದಾರೆ.
ಕಮೆಂಟ್ಸ್ ವಿಭಾಗದಲ್ಲಿ ಹಲವರು, ಮುಸ್ಲಿಮರ ನಮಾಝ್ ಮತ್ತು ರೋಜಾ ವಿಧಿಗಳ ಬಗ್ಗೆ ಈ ಅಭಿಪ್ರಾಯಗಳನ್ನು ಎಲ್ಲಿಂದ ಪಡೆದಿದ್ದೀರಿ ಎಂದು ಶರ್ಮಾರನ್ನು ಪ್ರಶ್ನಿಸಿದ್ದಾರೆ. ಓರ್ವ ಐಎಎಸ್ ಅಧಿಕಾರಿಯಾಗಿ ಇಂತಹ ಭಾಷೆ ನಿಮಗೆ ಶೋಭಿಸುವುದಿಲ್ಲ ಎಂದೂ ಅವರು ಕುಟುಕಿದ್ದಾರೆ.
ಆದರೆ ಇನ್ನೊಂದು ಪೋಸ್ಟ್‌ನಲ್ಲಿ ಶರ್ಮಾ, ತನ್ನ ಭಾಷೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸುತ್ತಿರುವವರಿಗೆ ತನ್ನ ಬಗ್ಗೆ ಸರಿಯಾಗಿ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.







