ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕ ವಿರೋಧಿಸಿ ಬೀದಿಗಿಳಿದ ವೈದ್ಯರು
ಅನಿದಿರ್ಷ್ಟಾವಧಿ ಮುಷ್ಕರದ ಎಚ್ಚರಿಕೆ

ಬೆಂಗಳೂರು, ಜೂ.16: ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸಲು ರಾಜ್ಯ ಸರಕಾರ ಜಾರಿಗೊಳಿಸಲು ಮುಂದಾಗಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಇಂದು ನಗರದ ಸ್ವಾತಂತ್ರ ಉದ್ಯಾನದಲ್ಲಿ ಖಾಸಗಿ ವೈದ್ಯರು ಬೃಹತ್ ಧರಣಿ ನಡೆಸಿದರು.
ಇದಕ್ಕೂ ಮೊದಲು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಸಂಘದ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ ಉದ್ಯಾನದವರೆಗೆ ವೈದ್ಯರು ಬೃಹತ್ ರ್ಯಾಲಿ ನಡೆಸಿರು. ರ್ಯಾಲಿಯ ಮಾರ್ಗದುದ್ದಕ್ಕೂ ವೈದ್ಯರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಹಿರಂಗ ಸಭೆಯಲ್ಲಿ ಖಾಸಗಿ ವೈದ್ಯರನ್ನ ಉದ್ದೇಶಿಸಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಮಾತನಾಡಿ, ರಾಜ್ಯ ಸರಕಾರ ಜಾರಿಗೆ ತರಲು ಮುಂದಾಗಿರುವ ವಿಧೇಯಕ ಕಾನೂನು ಸಂವಿಧಾನ ವೌಲ್ಯಗಳಿಗೆ ವಿದುದ್ಧವಾದದ್ದು. ಸರಕಾರಿ ಆಸ್ಪತ್ರೆಯಲ್ಲಿ ವ್ಯವಸ್ಥೆಗಳು ಸರಿಯಾಗಿದಿದ್ದರೆ ಖಾಸಗಿ ಆಸ್ಪತ್ರೆಗಳತ್ತ ಜನರು ಮುಖ ಮಾಡುತ್ತಿರಲಿಲ್ಲ. ಈ ಕಾಯ್ದೆಯನ್ನು ಕೈಬಿಟ್ಟು ಸರಕಾರಿ ಆಸ್ಪತ್ರೆಯ ಸಮಸ್ಯೆಗಳ ಬಗೆಹರಿಸುವತ್ತ ಗಮನ ಹರಿಸಿ ಎಂದು ಸರಕಾರಕ್ಕೆ ಸೂಚಿಸಿದರು.
ಖಾಸಗಿ ಆರೋಗ್ಯ ವ್ಯವಸ್ಥೆ ಚೆನ್ನಾಗಿದೆ. ಅದನ್ನು ಹಾಳು ಮಾಡಲು ಸರಕಾರ ಪ್ರಯತ್ನಿಸಬಾರದು. ಧನದಾಹಿಗಳು ರಾಜಕಾರಣಿಗಳೋ ಇಲ್ಲ ವೈದ್ಯರೋ. ರಾಜ್ಯದಲ್ಲಿ ಎಷ್ಟು ಸಚಿವರು, ಶಾಸಕರು ಸರಕಾರಿ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ ಎಂದು ಪ್ರಶ್ನಿಸಿದರು.
ಅಖಿಲ ಭಾರತ ವೈದ್ಯಕೀಯ ಸಂಘಟನೆಯ ಅಧ್ಯಕ್ಷ ಡಾ. ರವೀಂದ್ರ ಮಾತನಾಡಿ, ಸಚಿವ ರಮೇಶ್ ಕುಮಾರ್ ಅವರು ಖಾಸಗಿ ವೈದ್ಯರನ್ನು ನಿಕೃಷ್ಟವಾಗಿ ಕಾಣುತ್ತಿದ್ದಾರೆ. ನಮ್ಮನ್ನು ಲಜ್ಜೆಗೇಡಿ, ಲೂಟಿಕೋರರು ಎಂದು ಕರೆಯುತ್ತಾರೆ. ನಾವು ಕೂಡ ಸಂಸ್ಕಾರಯುತ ಕುಟುಂಬಗಳಿಂದ ಬಂದಿದ್ದೇವೆ. ಜನರಿಗೆ ವೈದ್ಯರಿಂದ ಅನ್ಯಾಯವಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ, ಅದಕ್ಕೆ ಈ ವಿಧೇಯಕ ಜಾರಿಗೆ ತರಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಚಿಕಿತ್ಸೆಗೆ ಇಷ್ಟು ಹಣ ಎಂದು ನಿಗದಿಮಾಡಲು ಇದು ಗಾರೆ, ಸಿಮೆಂಟ್ ಕೆಲಸ ಅಲ್ಲ. ವೈದ್ಯರು ಮಾಡುವುದು ಸೇವೆ, ಅದನ್ನು ವ್ಯಾಪಾರದ ದೃಷ್ಟಿಯಿಂದ ನೋಡಬಾರದು. ನಮ್ಮ ಅನುಭವಕ್ಕೆ ತಕ್ಕಂತೆ ಚಿಕಿತ್ಸೆಗೆ ಬೆಲೆಯನ್ನು ನಿಗದಿಪಡಿಸುವಂತ ಹಕ್ಕು, ಅಧಿಕಾರ ನಮಗಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಡಾ.ಮಲ್ಲೇಶ್ ಮಾತನಾಡಿ, ಈ ತಿದ್ದುಪಡಿಯಿಂದ ಆಸ್ಪತ್ರೆಗಳು ನಿಯಂತ್ರಣದ ಬದಲು, ವೈದ್ಯರೇ ನಿಯಂತ್ರಣಕ್ಕೆ ಒಳಪಡುತ್ತಾರೆ. ಈ ಕಾಯಿದೆ ವೈದ್ಯರ ಪಾಲಿಗೆ ಬಹಳ ಅಪಾಯಕಾರಿ. ಈ ರೀತಿಯ ಕಾನೂನುಗಳು ಜಗತ್ತಿನಲ್ಲಿ ಎಲ್ಲೂ ಇಲ್ಲ ಎಂದು ಹೇಳಿದರು.
ಧರಣಿಯಲ್ಲಿ ಶಾಸಕ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಖಾಸಗಿ ಆಸ್ಪತ್ರೆಗಳ ಸಂಘದ ಅಧ್ಯಕ್ಷ ಮದನ್ ಗಾಯಕ್ವಾಡ್, ವೈದ್ಯರಾದ ಡಾ.ಅಜಯ್ ಕುಮಾರ, ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಡಾ.ದೇವಿ ಪ್ರಸಾದ್ ಶೆಟ್ಟಿ ಸೇರಿದಂತೆ ಇತರರು ಇದ್ದರು.







