ವಿನಾಕಾರಣ ಮದ್ರಸ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಸೈನಿಕರು: ಆರೋಪ

ಶ್ರೀನಗರ, ಜೂ.16: ಇಲ್ಲಿನ ಕುಲ್ ಗಾಮ್ ಜಿಲ್ಲೆಯ ದಾರುಲ್ ಉಲೂಮ್ ಸವಾ ಉಸ್ಸಬೀಲ್ ವಿದ್ಯಾಸಂಸ್ಥೆಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳಿಗೆ ಸೇನೆಯ ಜವಾನರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳೀಯ ಮಸೀದಿಯೊಂದರಲ್ಲಿ ತರಾವೀಹ್ ನಮಾಝ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ 15 ವರ್ಷದ ಹಫೀಝ್ ಹಮೀದುಲ್ ಇಸ್ಲಾಂ ಹಾಗೂ 14 ವರ್ಷದ ಹಫೀಝ್ ಶೆಹಝಾದ್ ಅಹ್ಮದ್ ಎಂಬ ಬಾಲಕರಿಗೆ ಸೈನಿಕರು ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ದಾರುಲ್ ಉಲೂಮ್ ಆಡಳಿತ ಆರೋಪಿಸಿದೆ,
“ಕುರ್ ಆನ್ ಕಂಠಪಾಟ ಮಾಡಿದ ವಿದ್ಯಾರ್ಥಿಗಳನ್ನು ಪವಿತ್ರ ರಮಝಾನ್ ತಿಂಗಳಲ್ಲಿ ವಿವಿಧ ಕಡೆಗಳ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಕಳುಹಿಸುತ್ತಿದ್ದೆವು. ಇದರಂತೆ ಇಬ್ಬರು ವಿದ್ಯಾರ್ಥಿಗಳು ಸ್ಥಳೀಯ ಮಸೀದಿಗೆ ತೆರಳಿದ್ದರು. ಅಲ್ಲಿಂದ ಹಿಂತಿರುಗುವ ವೇಳೆ ಖಂಡಿಪೋರದಲ್ಲಿ ಸೈನಿಕರು ಅವರನ್ನು ತಡೆದಿದ್ದರು. ನಂತರ ಅವರನ್ನು ಪರಿಶೀಲಿಸಿ, ಮೊಬೈಲ್ ಕಿತ್ತುಕೊಂಡು ಏಕಾಏಕಿ ಹಲ್ಲೆ ನಡೆಸಿದ್ದಾರೆ” ಎಂದು ಸಂಸ್ಥೆಯ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ದಾರುಲ್ ಉಲೂಂ ಆಡಳಿತ ತಪ್ಪೆಸಗಿದ ಸೈನಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಸೇನೆ ಅಂತಹ ಘಟನೆ ನಡೆದಿಲ್ಲ ಎಂದಿದೆ.





