ಕುಡಿಯುವ ನೀರಿನ ಯೋಜನೆಯಲ್ಲಿ 612 ಕೋ. ಅಕ್ರಮ ಠೇವಣಿ, ಖಜಾನೆಗೆ ಜಮೆ: ಎಚ್.ಕೆ. ಪಾಟೀಲ್

ಬೆಂಗಳೂರು, ಜೂ.16: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಅಕ್ರಮವಾಗಿ ಹಲವು ಬ್ಯಾಂಕ್‌ಗಳಲ್ಲಿ ಜಮೆ ಮಾಡಲಾಗಿದ್ದ 612 ಕೋ. ರೂ.ಗಳನ್ನು ವಾಪಸ್ ಪಡೆದು ಸರಕಾರದ ಖಜಾನೆಗೆ ಜಮೆ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯಕೋಟ ಶ್ರೀನಿವಾಸ ಪೂಜಾರಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ಸಂಬಂಧ ಹಿಂದಿನ ಉಪಕಾರ್ಯದರ್ಶಿ ರಾಮಕೃಷ್ಣ ಮತ್ತು ಪತ್ರಾಂಕಿತ ವ್ಯವಸ್ಥಾಪಕ ಡಿ.ಎಚ್. ರಾಯಗೇರಿ ಅವರ ವಿರುದ್ಧ ದೋಷಾರೋಪಗಳನ್ನು ಜಾರಿಗೊಳಿಸಿ ಅಮಾನತುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಅಕ್ರಮವಾಗಿ ಠೇವಣಿ ಇಡಲಾಗಿತ್ತು. ಆ ಬ್ಯಾಂಕ್‌ನಿಂದಲೂ ಮೂಲ ಹಣವನ್ನು ವಾಪಸ್ ಪಡೆಯಲಾಗಿದೆ. ಆದರೆ, 250 ಕೋಟಿ ರೂ. ಬಡ್ಡಿಯನ್ನು ಬ್ಯಾಂಕ್ ನೀಡಿಲ್ಲ. 15 ದಿನಗಳ ಒಳಗಾಗಿ ಬಡ್ಡಿಯನ್ನು ನೀಡುವಂತೆ ನೋಟಿಸ್ ನೀಡಲಾಗುವುದು. ಬ್ಯಾಂಕ್ ಈ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವ ಚಿಂತನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರ ಬಿಡುಗಡೆ ಮಾಡುವ ಅನುದಾನವನ್ನು ಗ್ರಾಮೀಣಾಭಿವೃದ್ದಿ ಇಲಾಖೆ ಸಮರ್ಪಕವಾಗಿ ಬಳಸಿಕೊಂಡಿದೆ. ಯಾವುದೇ ಅನುದಾನ ದುರುಪಯೋಗವಾಗಿಲ್ಲ. ಆದರೆ, ಅನುದಾನವನ್ನು ಸದುಪಯೋಗಪಡಿಸಿಕೊಂಡು ಯೋಜನೆಗಳಲ್ಲಿ ಗರಿಷ್ಠ ಪ್ರಮಾಣದ ಗುರಿ ಸಾಧಿಸಲಾಗಿದೆ ಎಂದು ಹೇಳಿದರು.







