ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಇಬ್ಬರು ಸುರಕ್ಷಿತವಾಗಿ ತವರಿಗೆ

ಮಂಗಳೂರು, ಜೂ. 16: ಸೌದಿಯಲ್ಲಿ ಉತ್ತಮ ವೇತನದ ಉದ್ಯೋಗದ ಆಸೆಯಲ್ಲಿ ನಗರದ ಏಜೆಂಟ್ ಸಂಸ್ಥೆಯೊಂದರ ಮೂಲಕ ತೆರಳಿ, ಸಂಕಷ್ಟದಲ್ಲಿ ಸಿಲುಕಿದ್ದ ಇಬ್ಬರು ಯುವಕರು ತುಳುನಾಡ ರಕ್ಷಣಾ ವೇದಿಕೆಯ ಸಹಕಾರದೊಂದಿಗೆ ಇಂದು ಮಂಗಳೂರಿಗೆ ತಲುಪಿದ್ದಾರೆ.
ಸುಳ್ಯದ ಶರತ್ ಕುಮಾರ್ ಹಾಗೂ ರವಿ ವಾಝ್ ಎಂಬವರು ನಿನ್ನೆ ಸೌದಿಯಿಂದ ಮುಂಬೈಗೆ ಆಗಮಿಸಿದ್ದು, ಅಲ್ಲಿಂದ ರೈಲಿನ ಮೂಲಕ ಮಂಗಳೂರಿಗೆ ಬಂದು ತಲುಪಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಘಟನೆಯ ಬಗ್ಗೆ ಮಾಹಿತಿ ನೀಡಿದ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ, ಸೌದಿಯಲ್ಲಿ ಉತ್ತಮ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬಳಿಕ ವಂಚಿಸುತ್ತಿರುವ ಘಟನೆಗಳು ನಗರದ ಕೆಲವು ವೀಸಾ ಏಜೆಂಟ್ ಸಂಸ್ಥೆಗಳಿಂದ ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವೇದಿಕೆಯು ನಗರ ಪೊಲೀಸ್ ಆಯುಕ್ತರಿಗೆ ಇಂದು ಸಂತ್ರಸ್ತರ ಜತೆಯಲ್ಲಿ ತೆರಳಿ ಮನವಿ ಸಲ್ಲಿಸಿದೆ ಎಂದರು.
ಮಂಗಳೂರಿನ ಏಜೆಂಟರು ಇಲ್ಲಿನ ಯುವ ಉದ್ಯೋಗಾಕಾಂಕ್ಷಿಗಳನ್ನು ಸಂಬಳದ ಆಸೆ ತೋರಿಸಿ ಸೌದಿಗೆ ಕಳುಹಿಸುತ್ತಾರೆ. ಈ ನಡುವೆ ಸೌದಿ ಮತ್ತು ಮಂಗಳೂರಿನ ಏಜೆಂಟರ ನಡುವೆ ಮತ್ತೆ ಕೆಲವರು ಏಜೆಂಟರುಗಳು ಕಾರ್ಯ ನಿರ್ವಹಿಸುತ್ತಾರೆ. ಈ ಮೂಲಕ ಕಮಿಷನ್ ವ್ಯವಹಾರದ ನಡುವೆ ಉತ್ತಮ ಉದ್ಯೋಗವನ್ನು ನಂಬಿ ಹೋದ ಯುವಕರು ಅಲ್ಲಿ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಈ ಸಂದರ್ಭ ಅವರಿಗೆ ಸ್ಪಂದಿಸುವವರು ಯಾರೂ ಇರುವುದಿಲ್ಲ ಎಂದು ಅವರು ಹೇಳಿದರು.
ಸೌದಿಗೆ ತೆರಳುವವರು ಉದ್ಯೋಗದ ಬಗ್ಗೆ ಹಾಗೂ ಏಜೆಂಟರ ಬಗ್ಗೆ ಖಾತರಿಯನ್ನು ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ವಂಚನೆಗೆ ಒಳಗಾದರೆ ವಿದೇಶದಲ್ಲಿ ಸುಲಭದಲ್ಲಿ ವಾಪಸ್ ಬರಲಾಗುವುದಿಲ್ಲ. ಮಾತ್ರವಲ್ಲದೆ, ಇಲ್ಲಿನ ಏಜೆಂಟರು ಕೇವಲ ಮನಪಾದ ಪರವಾನಿಗೆ ಪಡೆದು ವ್ಯವಹಾರ ನಡೆಸುತ್ತಾರೆ. ಅವರ ಅಧಿಕೃತತೆಯ ಬಗ್ಗೆ ಯಾವುದೇ ದಾಖಲೆ ಇರುವುದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸಬೇಕು. ಸಂಪೂರ್ಣ ಸುರಕ್ಷತೆಯ ಖಾತರಿ ಇಲ್ಲದೆ ಏಜೆಂಟರು ಉದ್ಯೋಗಕ್ಕಾಗಿ ಇಲ್ಲಿನವರನ್ನು ಕಳುಹಿಸುವ ವ್ಯವಸ್ಥೆಯಾಗಬಾರದು. ಈ ಎಲ್ಲಾ ವಿಷಯಗಳ ಬಗ್ಗೆ ಪೊಲೀಸ್ ಆಯುಕ್ತರ ಗಮನ ತರಲಾಗಿದೆ ಎಂದು ಅವರು ಹೇಳಿದರು.
ಕನಸು ಕಂಡಿದ್ದೇ ಬಂತು, ನೆರವೇರಲಿಲ್ಲ!
‘‘ನಾನು ಕೈತುಂಬ ಸಂಬಳ ಸಿಗುವ ಕನಸಿನೊಂದಿಗೆ ಸೌದಿಯಲ್ಲಿ ಉದ್ಯೋಗಕ್ಕೆ ತೆರಳಿದ್ದೆ. ಆದರೆ ಕಳೆದ 11 ತಿಂಗಳಲ್ಲಿ ಯಾವ ಕನಸೂ ಈಡೇರಲಿಲ್ಲ. ಬದಲಾಗಿ ಅತ್ತ ಸರಿಯಾಗಿ ಸಂಬಳವೂ ಸಿಗದೆ, ಆಹಾರವೂ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು’’ ಎಂದು ಸುಳ್ಯ ನಿವಾಸಿ ಶರತ್ ಕುಮಾರ್ ತಾವು ಅನುಭವಿಸಿದ ಸಂಕಷ್ಟವನ್ನು ವಿವರಿಸಿದರು.
‘ಸೌದಿಯಲ್ಲಿ ಅರಬ್ ಕಂಪನಿ 'ಫಾರ್ ಮೋಡರ್ನ್ ಇಂಡಸ್ಟ್ರಿ' ಹೆಸರಿನ ಕಂಪನಿಯಲ್ಲಿ ಸೇಲ್ಸ್ ಕಂ ಡ್ರೈವರ್ ಕೆಲಸಕ್ಕೆ ಸೇರಿದ್ದೆವು. ಒಟ್ಟು 20 ಮಂದಿ ಜತೆಗಿದ್ದೆವು. ಮೊದಲ ಮೂರು ತಿಂಗಳು ನಮಗೆ ಸಂಬಳ ಕೊಡಲಿಲ್ಲ. ಬಳಿಕ ಕಂಪನಿಯ ಪ್ರಮುಖರನ್ನು ಒತ್ತಾಯಿಸಲಾಯಿತು. ಇದೇ ವೇಳೆ ಕೇರಳಿಗರಿಂದ ಪ್ರತಿಭಟನೆ ವ್ಯಕ್ತವಾಯಿತು. ನಂತರ ಕೆಲ ತಿಂಗಳು ಸಂಬಳ ದೊರೆಯಿತು. ಆದರೆ ಸಂಬಳದ ಜತೆ ಕಮಿಷನ್ ಕೊಡುವುದಾಗಿ ಹೇಳಿದ್ದರಾದರೂ ಅದು ಮಾತ್ರ ಸಿಗಲಿಲ್ಲ. ಬೆಳಗ್ಗೆ 6 ಗಂಟೆಯಿಂದ ಮರುದಿನ ನಸುಕಿನವರೆಗೂ ಕೆಲಸ ಮಾಡಬೇಕಿತ್ತು. ಚಾಲಕನಾಗಿ ಕಾರ್ಯ ನಿರ್ವಹಿಸುವ ಜತೆಗೆ ಲೋಡ್ ಮತ್ತು ಅನ್‌ಲೋಡ್ ಮಾಡುವ ಕೆಲಸವನ್ನೂ ಮಾಡಬೇಕಿತ್ತು. ಇದರಿಂದ ಬೇಸತ್ತು ವಾಪಾಸು ಬರಲು ನಿರ್ಧರಿಸಿದೆವು’ ಎಂದು ಅವರು ಹೇಳಿದರು.
‘ಆದರೆ ಕಳೆದ ಕೆಲವು ದಿನಗಳಲ್ಲಿ ಸೌದಿಯಲ್ಲಿ ಬಹುತೇಕವಾಗಿ ರಮಝಾನ್ ಉಪವಾಸ ಆಚರಿಸುತ್ತಿದ್ದರಿಂದ ನಾವು ತಿನ್ನಲು ಆಹಾರವಿಲ್ಲದೆ ಪರದಾಡಬೇಕಾಯಿತು. ಸಂಜೆ ಇಫ್ತಾರ್ ವೇಳೆ ಮಸೀದಿಯಲ್ಲಿ ಆಹಾರಕ್ಕಾಗಿ ಎದುರು ನೋಡುವ ಪರಿಸ್ಥಿತಿ ನಮ್ಮದಾಗಿತ್ತು. ಇದೇ ವೇಳೆ, ನಾವು ವಾಪಾಸು ಬರಲು ನಿರ್ಧರಿಸಿದಾಗ ನಮಗೆ ಮೂರು ತಿಂಗಳ ವೇತನವನ್ನು ತಡೆ ಹಿಡಿಯಲಾಯಿತು. ಮಾತ್ರವಲ್ಲದೆ, ಕಂಪನಿ ಮಾಲಕರು ಪಾಸ್‌ಪೋರ್ಟ್, ವೀಸಾ ಮರಳಿಸದೆ ಸತಾಯಿಸಿದರು. ಎರಡು ವರ್ಷದ ಒಪ್ಪಂದ ಇರುವುದರಿಂದ 1 ಲಕ್ಷ ರೂ. ಮೊತ್ತ ಪಾವತಿಸಿ ತೆರಳುವಂತೆ ಸೂಚಿಸಿದ್ದರು. ಆದರೆ ನಮ್ಮಲ್ಲಿ ಹಣವೇ ಇರಲಿಲ್ಲ. ಕೊನೆಗೆ ತುಳುನಾಡ ರಕ್ಷಣಾ ವೇದಿಕೆಯು ಮಂಗಳೂರಿನ ಏಜೆಂಟ್‌ಗೆ ಒತ್ತಡ ಹಾಕಿದ ಪರಿಣಾಮ ಅಲ್ಲಿಂದ ಬೇಷರತ್ತಾಗಿ ಬಿಡುಗಡೆ ಸಿಕ್ಕಿತು. ನಮ್ಮಂತೆಯೇ ಉದ್ಯೋಗ ವಂಚನೆಗೆ ಒಳಗಾಗಿ ದಾಖಲೆಗಳಿಲ್ಲದೆ ಅನೇಕ ಮಂದಿ ಸಂಕಷ್ಟದಲ್ಲಿದ್ದಾರೆ’’ ಎಂದು ರವಿ ವಾಝ್ ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಸುಳ್ಯ ಘಟಕದ ಅಧ್ಯಕ್ಷ ಪ್ರಶಾಂತ್ ರೈ, ಕಾರ್ಯದರ್ಶಿ ಕಾರ್ತಿಕ್ ರೈ ಹಾಗೂ ರಂಜಿತ್ ಬೆಲ್ಳಾರೆ, ಅಬ್ದುಲ್ ಲತೀಫ್, ಭರತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







