ಹಲ್ಲೆ, ಗಲಭೆಗಳಿಗೆ ಆರೆಸ್ಸೆಸ್ ಬೆಂಬಲ: ಪಿ.ವಿ. ಮೋಹನ್

ಮಂಗಳೂರು, ಜೂ.16: ಕಲ್ಲಡ್ಕ ಗಲಭೆ ಪ್ರಕರಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿಗರಾದ ಅಲ್ಪ ಸಂಖ್ಯಾತರನ್ನೆ ಗುರಿಯಿಟ್ಟು ಬೆದರಿಸಿ, ಹಲ್ಲೆ ನಡೆಸಿ ಗಲಭೆಗಳಿಗೆ ಆರ್.ಎಸ್.ಎಸ್.ನ ಬೆಂಬಲಿಗರು ಪ್ರಚೋದಿಸುತ್ತಿದ್ದಾರೆ ಎಂದು ಎಐಸಿಸಿ ಸದಸ್ಯ ಪಿ.ವಿ. ಮೋಹನ್ ಆಪಾದಿಸಿದ್ದಾರೆ.
ಕಲ್ಲಡ್ಕ ಚೂರಿ ಪ್ರಕರಣಕ್ಕೆ ಕೋಮು ಬಣ್ಣವನ್ನು ಹಚ್ಚಿ ಜನರನ್ನು ಭಾವನಾತ್ಮಕವಾಗಿ ಉನ್ಮಾದಿಸಿ ಉಭಯ ಜಿಲ್ಲೆಗಳಲ್ಲಿ ಕೋಮು ಬೆಂಕಿ ಹಾಕಿ, ಶಾಂತಿ ಕದಕಿ ರಾಜ್ಯ ಸರಕಾರದ ಹೆಸರನ್ನು ಕೆಡಿಸುವ ಪ್ರಯತ್ನವನ್ನು ಆರ್.ಎಸ್.ಎಸ್. ಮತ್ತು ಬಿಜೆಪಿ ಪಕ್ಷ ಮಾಡುತ್ತಿದೆ. ಇದಕ್ಕೆ ಕುಮಕ್ಕು ನೀಡುತ್ತಿರುವ ಸೂತ್ರಧಾರಿಗಳನ್ನು ಮೀನ ಮೇಷ ಮಾಡದೆ ಕೂಡಲೇ ಬಂಧಿಸಬೇಕೆಂದು ಕಾಂಗ್ರೆಸ್ ಪಕ್ಷವು ಆಗ್ರಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಲ್ಲಡ್ಕದಲ್ಲಿ ಪದೇ ಪದೇ ಕೋಮು ಪ್ರಕರಣಗಳು ಮರುಕಳಿಸುತ್ತಿವೆ. ಆರ್.ಎಸ್.ಎಸ್.ನ ಮುಖಂಡ ಪ್ರಭಾಕರ ಭಟ್ ಅವರು ದ್ವೇಷ ಪೂರಿತ ಹೇಳಿಕೆ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದಾರೆ. ಅವರು ತನ್ನ ವಿದ್ಯಾ ಸಂಸ್ಥೆಯನ್ನು ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆದ ಬಹುತೇಕ ಕೋಮು ಪ್ರಕರಣಗಳಲ್ಲಿ ಅವರ ಕೈವಾಡ ಇದೆ ಎಂಬ ಅಪಾದನೆ ಇದೆ. ಅವರನ್ನು ಬಂಧಿಸಿ ತನಿಖೆ ನಡೆಸಬೇಕೆಂದು ಪಿ.ವಿ. ಮೋಹನ್ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ಪ್ರತಿಷ್ಠಾಪನೆಯಾಗಬೇಕಾದರೆ ಮೊದಲು ಅಲ್ಪಸಂಖ್ಯಾಕರಲ್ಲಿ ವಿಶ್ವಾಸ, ಧೈರ್ಯ ತುಂಬುವ ಕೆಲಸವಾಗಬೇಕಾಗಿದೆ. ಸಂವಿಧಾನದ ಪ್ರಕಾರ ಅಲ್ಪ ಸಂಖ್ಯಾಕರ ಹಾಗೂ ದುರ್ಬಲರ ರಕ್ಷಣೆಯು ಸರಕಾರದ ಆದ್ಯಕರ್ತವ್ಯವಾಗಿದೆ. ಪೊಲೀಸರಿಂದ ಪಕ್ಷಪಾತಿ ಧೋರಣೆಯಾಗಿದೆ ಎಂದು ದೂರು ಇದೆ. ಅಮಾಯಕರನ್ನು ಕೂಡಲೇ ಬಿಡುಗಡೆ ಗೊಳಿಸಬೇಕು. ಮಹಿಳಾ ಪೊಲೀಸರನ್ನು ಬಳಸದೆ ಮಧ್ಯರಾತ್ರಿಯಲ್ಲಿ ಮನೆಗಳಿಗೆ ನುಗ್ಗಿ ಮಹಿಳೆಯರಿಗೆ ಕಿರುಕುಳ ನೀಡಿದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಕೇಂದ್ರದಲ್ಲಿ ಬಿಜೆಪಿ ಸರಕಾರವು ತನ್ನ ಕೆಟ್ಟ ಆರ್ಥಿಕ ನೀತಿಯಿಂದ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ. ನೋಟು ಅಮಾನ್ಯದಿಂದ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ಗೊತ್ತುಗುರಿಯಿಲ್ಲದೆ ಬಿಜೆಪಿಯು ಸಮಾಜವನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಜಿಲ್ಲೆಯಲ್ಲಿ ಈಗ ಬಿಜೆಪಿ ಓಟಿಗೋಸ್ಕರ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಅದಕ್ಕಾಗಿ ಕೋಮು ಗಲಭೆಯನ್ನು ಸೃಷ್ಟಿಸುತ್ತಿದೆ. ಹುಸಿ ದೇಶಭಕ್ತಿ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದೆ. ರಾಜಕೀಯವಾಗಿ ಇದನ್ನು ಸಮರ್ಥ ರೀತಿಯಲ್ಲಿ ಕಾಂಗ್ರೆಸ್ ಪಕ್ಷವು ಎದುರಿಸಲಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡಲು ಹೋರಾಡಲಿದೆ ಎಂದು ಅವರು ಹೇಳಿದ್ದಾರೆ.







