ಬಯಲುಶೌಚ ಮಾಡುತ್ತಿದ್ದ ಮಹಿಳೆಯರ ಫೋಟೊ ತೆಗೆಯಲು ಯತ್ನ: ತಡೆದ ವೃದ್ಧನನ್ನು ಹೊಡೆದು ಕೊಂದ ಸರಕಾರಿ ಅಧಿಕಾರಿಗಳು

ರಾಜಸ್ಥಾನ, ಜೂ.16: ಬಯಲುಶೌಚದಲ್ಲಿದ್ದ ಮಹಿಳೆಯರ ಫೋಟೊ ತೆಗೆಯಲು ಪ್ರಯತ್ನಿಸಿದಾಗ ತಡೆದಿದ್ದಕ್ಕಾಗಿ ರಾಜಸ್ಥಾನದ ಸರಕಾರಿ ಅಧಿಕಾರಿಗಳು 55 ವರ್ಷದ ವೃದ್ಧರೊಬ್ಬರನ್ನು ಹೊಡೆದು ಕೊಂದ ಘಟನೆ ನಡೆದಿದೆ.
ಪ್ರತಾಪ್ ಘಡ್ ಮುನಿಸಿಪಲ್ ಕೌನ್ಸಿಲ್ ನ ಐವರು ಅಧಿಕಾರಿಗಳು 55 ವರ್ಷದ ಝಫರ್ ಖಾನ್ ರಿಗೆ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
“ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ನಾವು ಸ್ಥಳಕ್ಕೆ ಧಾವಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದೆವು ಆದರೆ ಆತ ಅದಾಗಲೇ ಮೃತಪಟ್ಟಿದ್ದ” ಎಂದು ಝಫರ್ ಖಾನ್ ರ ಸಹೋದರ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿದ್ದ ಝಫರ್ ಖಾನ್ ತಮ್ಮ ಗ್ರಾಮದಲ್ಲಿ ಶೌಚಾಲಯ ನಿರ್ಮಿಸುವಂತೆ ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸುತ್ತಲೇ ಇದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಆ ಪ್ರದೇಶದಲ್ಲಿ ಯಾವುದೇ ಶೌಚಾಲಯಗಳಿರಲಿಲ್ಲ. ಆದ್ದರಿಂದ ಮಹಿಳೆಯರು ಬಯಲುಶೌಚಕ್ಕೆ ತೆರಳುತ್ತಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಸರಕಾರಿ ಅಧಿಕಾರಿಗಳು ಮಹಿಳೆಯರ ಫೋಟೊ ತೆಗೆಯಲು ಮುಂದಾಗಿದ್ದರು. ಇದಕ್ಕೆ ಝಫರ್ ಖಾನ್ ವಿರೋಧ ವ್ಯಕ್ತಪಡಿಸಿದ್ದು, ದುಷ್ಕರ್ಮಿಗಳು ಅವರನ್ನು ಥಳಿಸಿ ಕೊಂದಿದ್ದಾರೆ.







