ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಬಗ್ದಾದಿ ಮೃತಪಟ್ಟಿರಬಹುದು: ರಶ್ಯ ಸೇನೆ

ಮಾಸ್ಕೊ, ಜೂ. 16: ಸಿರಿಯದಲ್ಲಿ ಕಳೆದ ತಿಂಗಳು ಡೇಯಿಶ್ (ಐಸಿಸ್) ನಾಯಕರ ಮೇಲೆ ತಾನು ವಾಯು ದಾಳಿ ನಡೆಸಿದ್ದು, ಭಯೋತ್ಪಾದಕ ಗುಂಪಿನ ಮುಖ್ಯಸ್ಥ ಅಬುಬಕರ್ ಅಲ್-ಬಗ್ದಾದಿ ಆ ದಾಳಿಯಲ್ಲಿ ಸತ್ತಿದ್ದಾನೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ರಶ್ಯ ಸೇನೆ ಶುಕ್ರವಾರ ಹೇಳಿದೆ.
ರಖ ಸಮೀಪದ ಸ್ಥಳವೊಂದರಲ್ಲಿ ಮೇ 28ರಂದು ರಾತ್ರಿ ಸುಮಾರು 10 ನಿಮಿಷ ಸುಖೋಯ್ ಯುದ್ಧ ವಿಮಾನಗಳು ವಾಯು ದಾಳಿ ನಡೆಸಿದವು ಎಂದು ಹೇಳಿಕೆಯೊಂದರಲ್ಲಿ ಸೇನೆ ತಿಳಿಸಿದೆ. ಐಸಿಸ್ ಭದ್ರಕೋಟೆ ರಖದಿಂದ ಉಗ್ರರನ್ನು ಹಿಂದಕ್ಕೆ ಪಡೆಯುವ ಯೋಜನೆಯ ಬಗ್ಗೆ ಚರ್ಚಿಸುವುದಕ್ಕಾಗಿ ಡೇಯಿಶ್ ನಾಯಕರು ಅಲ್ಲಿ ಸೇರಿದ್ದರು ಎಂದು ಅದು ಹೇಳಿದೆ.
‘‘ತಥಾಕಥಿತ ಡೇಯಿಶ್ ಸೇನಾ ಮಂಡಳಿಯ ಸೇನಾ ಗುಂಪುಗಳ ಹಿರಿಯ ಕಮಾಂಡರ್‌ಗಳು, 30 ಮಧ್ಯಮ ಶ್ರೇಣಿಯ ಕ್ಷೇತ್ರ ಕಮಾಂಡರ್‌ಗಳು ಮತ್ತು ಅವರಿಗೆ ಭದ್ರತೆ ಒದಗಿಸುತ್ತಿದ್ದ 300ರಷ್ಟು ಉಗ್ರರು ಈ ದಾಳಿಯಲ್ಲಿ ಹತರಾಗಿದ್ದಾರೆ’’ ಎಂದು ರಶ್ಯ ಸೇನೆ ತಿಳಿಸಿದೆ.
‘‘ಡೇಯಿಶ್‌ನ ನಾಯಕ ಅಬುಬಕರ್ ಅಲ್ ಬಗ್ದಾದಿ ಕೂಡ ಆ ಸಭೆಯಲ್ಲಿದ್ದ ಹಾಗೂ ವಾಯು ದಾಳಿಯಲ್ಲಿ ಹತನಾದ ಎಂಬ ಮಾಹಿತಿ ಲಭಿಸಿದೆ. ಈ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ’’ ಎಂದು ಹೇಳಿಕೆ ತಿಳಿಸಿದೆ.
ಖಚಿತಪಟ್ಟಿಲ್ಲ: ಅಮೆರಿಕ
ರಶ್ಯ ಸೇನೆಯ ಹೇಳಿರುವಂತೆ, ಅದರ ವಾಯು ದಾಳಿಯಲ್ಲಿ ಐಸಿಸ್ ಮುಖ್ಯಸ್ಥ ಅಬುಬಕರ್ ಅಲ್ ಬಗ್ದಾದಿ ಮೃತಪಟ್ಟಿರುವುದು ಖಚಿತವಾಗಿಲ್ಲ ಎಂದು ಡೇಯಿಶ್ ಭಯೋತ್ಪಾದಕ ಗುಂಪಿನ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಮೈತ್ರಿಕೂಟ ಶುಕ್ರವಾರ ಹೇಳಿದೆ.
‘‘ಈ ವರದಿಗಳನ್ನು ನಾವು ತಕ್ಷಣಕ್ಕೆ ಖಚಿತಪಡಿಸಲಾರೆವು’’ ಎಂದು ಅಮೆರಿಕ ಸೇನಾ ಕರ್ನಲ್ ರಯಾನ್ ಎಸ್. ದಿಲ್ಲಾನ್ ಹೇಳಿದರು.







