ಕುಮಟಾದ ತದಡಿಗೆ ಮೀನು ಶಿಥೀಲಿಕರಣ ಘಟಕ ಮಂಜೂರು: ನಿರ್ಮಲಾ ಸೀತಾರಾಮನ್

ಉಡುಪಿ, ಜೂ.16: ಕುಮಟಾ ತಾಲೂಕಿನ ತದಡಿಯಲ್ಲಿ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕೆಗೆ ಮೂಲಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಮೀನು ಶಿಥೀಲಿಕರಣ ಘಟಕವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿರುವ ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಕಚೇರಿಯಲ್ಲಿ ಶುಕ್ರವಾರ ಮೀನುಗಾರಿಕೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತ ಮನವಿಯನ್ನು ಮೀನುಗಾರ ಮುಖಂಡರಿಂದ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಕರ್ನಾಟಕ ರಾಜ್ಯಕ್ಕೆ ಮಂಜೂರಾಗಿರುವ ಮೊದಲ ಘಟಕ ಇದಾಗಿದ್ದು, ಸದ್ಯಕ್ಕೆ ಎರಡು ಕೋಟಿ ರೂ. ಮಂಜೂರು ಮಾಡಲಾಗಿದೆ. ಈ ಕುರಿತು ರಾಜ್ಯದ ವಿವಿಧ ಕಡೆಗಳಿಂದ ಪ್ರಸ್ತಾವನೆಗಳು ಬರುತ್ತಿದ್ದು, ಮುಂದೆ ಮಲ್ಪೆಗೂ ಇಂತಹ ಘಟಕ ಒದಗಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಹೊರಹೋಗುವ ಸರಕುಗಳನ್ನು ಉತ್ತೇಜಿಸುವ ದೃಷ್ಠಿಯಿಂದ ರಾಜ್ಯಗಳಲ್ಲಿ ರಫ್ತು ಅಭಿವೃದ್ಧಿಗೆ ಸಂಬಂಧಿಸಿ ಮೂಲಸೌಕರ್ಯಗಳನ್ನು ಒದಗಿಸುವ ಟೈಸ್ (ಟ್ರೇಡ್ ಇನ್ಫಸ್ಟ್ರಕ್ಚರ್ ಫಾರ್ ಎಕ್ಸ್‌ಪೋರ್ಟ್ ಸ್ಕೀಮ್) ಎಂಬ ಹೊಸ ಯೋಜನೆ ಯನ್ನು ಕೇಂದ್ರ ಸರಕಾರ ಪ್ರಾರಂಭಿಸಿದೆ ಎಂದು ಅವರು ಹೇಳಿದರು.
ಜಿಎಸ್‌ಟಿ ವಿನಾಯಿತಿಗೆ ಮನವಿ: ಕೃಷಿಗೆ ಸಿಗುವ ಎಲ್ಲ ಸವಲತ್ತುಗಳನ್ನು ಮೀನುಗಾರಿಕೆ ನೀಡಬೇಕು ಮತ್ತು ಕೇಂದ್ರ ಸರಕಾರದ ಹೊಸ ತೆರಿಗೆ ನೀತಿ ಜಿಎಸ್‌ಟಿಯಲ್ಲಿ ಮೀನುಗಾರಿಕೆಗೆ ವಿಧಿಸಿರುವ ತೆರಿಗೆಯನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಹಿರಿಯಣ್ಣ ಕಿದಿಯೂರು ಹಾಗೂ ಫೆಡರೇಶನ್ ನಿರ್ದೇಶಕ ರಾಮಚಂದ್ರ ಕುಂದರ್ ಸಚಿವೆ ನಿರ್ಮಲಾ ಸೀತಾರಾಮ್‌ಗೆ ಮನವಿ ಸಲ್ಲಿಸಿದರು.
ಈಗ ತೆರಿಗೆ ರಹಿತವಾಗಿ ಮೀನುಗಾರರಿಗೆ ದೊರೆಯುತ್ತಿದ್ದ ಮೀನುಗಾರಿಕೆಗೆ ಉಪಯೋಗಿಸುವ ಸಲಕರಣೆಗಳಾದ ಬಲೆ, ವಯರ್ ರೋಪ್, ಪ್ಲೋಟ್‌ಗಳಿಗೆ ಕೇಂದ್ರ ಸರಕಾರದ ಹೊಸ ತೆರಿಗೆ ನೀತಿ ಜಿಎಸ್‌ಟಿಯಲ್ಲಿ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತದೆ. ಅದೇ ರೀತಿ ಪ್ರಸ್ತುತ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತಿದ್ದ ಮಂಜುಗಡ್ಡೆ ಸ್ಥಾವರಕ್ಕೂ ಜಿಎಸ್‌ಟಿಯಲ್ಲಿ ಶೇ.12ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದುದರಿಂದ ಇವುಗಳನ್ನು ಜಿಎಸ್‌ಟಿಯಿಂದ ಹೊರಗೆ ಇಟ್ಟು ತೆರಿಗೆ ರಹಿತವಾಗಿ ಮೀನುಗಾರಿಕಾ ಸಲಕರಣೆಗಳು ಸಿಗುವಂತೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಮಲ್ಪೆ ಮಹಿಳಾ ಮೀನು ಮಾರಾಟಗಾರರ ಸಹಕಾರಿ ಸಂಘವು ಪ್ರಸ್ತುತ ಬಳಕೆ ಮಾಡುತ್ತಿರುವ ಸರಕಾರಿ ಜಾಗವನ್ನು ಮುಂದಿನ 30ವರ್ಷಗಳ ಅವಧಿಗೆ ಲೀಸ್‌ಗೆ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಂಘದ ಗೌರವಾಧ್ಯಕ್ಷೆ ಅಪ್ಪಿ ಎಸ್. ಸುವರ್ಣ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಹಾಗೂ ಮೀನು ಗಾರ ಮುಖಂಡರು ಉಪಸ್ಥಿತರಿದ್ದರು.







