ವಿವಿಗಳ ಸ್ವಾತಂತ್ರವನ್ನು ನಾಶಗೊಳಿಸುವ ಪ್ರಯತ್ನ
ಕರ್ನಾಟಕ ರಾಜ್ಯ ವಿವಿ ಮಸೂದೆ-2017
ಬೆಂಗಳೂರು, ಜೂ. 16: ವಿಧಾನಸಭೆಯಲ್ಲಿ ಉನ್ನತ ಶಿಕ್ಷಣ ಸಚಿವರು ಮಂಡಿಸಿರುವ ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ-2017’ ಮಸೂದೆಯು ವಿಶ್ವವಿದ್ಯಾಲಯಗಳ ಸ್ವಾತಂತ್ರವನ್ನು ನಾಶಗೊಳಿಸಿ, ವ್ಯಾಪಕ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಆರೋಪಿಸಿದೆ.
ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿ ನಡೆಯುತ್ತಿರುವ ರಾಜ್ಯದ 22 ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯನ್ನು ಏಕರೂಪಕ್ಕೆ ತರುವ ಉದ್ದೇಶದಿಂದ ಹಾಗೂ ವಿವಿಗಳಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಈ ವಿಧೇಯಕ ಮಂಡಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ವಿಧೇಯಕದಲ್ಲಿನ ಅಂಶಗಳನ್ನು ಗಮನಿಸಿದರೆ ಇದಕ್ಕೆ ವಿರುದ್ಧವಾಗಿರುವುದು ಗೋಚರಿಸುತ್ತದೆ ಎಂದರು.
ವಿಶ್ವವಿದ್ಯಾಲಯಗಳಲ್ಲಿನ ಕಾಮಗಾರಿ ಮೇಲ್ವಿಚಾರಣೆ ನೋಡಿಕೊಳ್ಳಲು ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ಇರಲಿದೆ. ಸರಕಾರ ನಾಲ್ವರು ಸದಸ್ಯರನ್ನು ನೇಮಕ ಮಾಡಬಹುದು ಎಂದು ಹೇಳಲಾಗಿದೆ. ಅಲ್ಲದೆ, ಕಾಲೇಜು ಅಭಿವೃದ್ಧಿ ಮಂಡಳಿ, ಶಾಲಾಭಿವೃದ್ಧಿ ಮಂಡಳಿಯಲ್ಲಿ ಈಗಾಗಲೇ ರಾಜಕೀಯ ನಡೆಯುತ್ತಿದೆ. ಹೀಗಿರುವಾಗ ವಿವಿ ಅಭಿವೃದ್ಧಿ ಮಂಡಳಿಗೆ ಸಚಿವರು ಅಧ್ಯಕ್ಷರಾದರೆ ಮೇಕೆಯನ್ನು ತೋಳದ ಕೈಯಿಂದ ಬಿಡಿಸಿ, ಹುಲಿಯ ಕೈಗೆ ಕೊಟ್ಟಂತಾಗುತ್ತದೆ ಎಂದು ಎಸ್‌ಎಫ್‌ಐ ಅಧ್ಯಕ್ಷ ವಿ.ಅಂಬರೀಶ್ ಟೀಕಿಸಿದ್ದಾರೆ.
ತಜ್ಞರ ಸಮಿತಿ ರಚಿಸಿ ಬೋಧಕ ಮತ್ತು ಬೋಧಕೇತರರನ್ನು ನೇಮಿಸುವುದನ್ನು ತೆಗೆದು ಸಚಿವರ ಅಧ್ಯಕ್ಷತೆಯಲ್ಲಿರುವ ಮಂಡಳಿ ನೇಮಕಾತಿ ಕಾರ್ಯವನ್ನು ನಿರ್ವಹಿಸುತ್ತದೆ ಎಂದು ಹೇಳಲಾಗಿದೆ. ಕುಲಪತಿಗಳು ಅನಾರೋಗ್ಯ ಅಥವಾ ಪ್ರವಾಸ ಹೊರಟಾಗ, ನಿವೃತ್ತರಾದಾಗ ಆಯಾ ವಿ.ವಿಯ ಹಿರಿಯ ಉಪನ್ಯಾಸಕರು ಪ್ರಭಾರ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ಈಗ ಅದನ್ನು ರದ್ದುಗೊಳಿಸಿ ಬೇರೆ ವಿ.ವಿ ಯ ಕುಲಪತಿಗಳಿಗೆ ಪ್ರಭಾರದ ಹೊಣೆ ನೀಡುವ ಮೂಲಕ ಅರಾಜಕತೆಯನ್ನು ಪ್ರದರ್ಶಿಸಿದ್ದಾರೆ ಎಂದು ದೂರಿದರು.