ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ : ವರದಿ ತಳ್ಳಿಹಾಕಿದ ಇ.ಶ್ರೀಧರನ್

ಹೊಸದಿಲ್ಲಿ, ಜೂ.16: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನನ್ನು ಅಭ್ಯರ್ಥಿಯನ್ನಾಗಿ ಎನ್‌ಡಿಎ ಕಣಕ್ಕಿಳಿಸಲಿದೆ ಎಂಬ ವರದಿಯನ್ನು ‘ಮೆಟ್ರೊ ಮ್ಯಾನ್’ ಎಂದೇ ಜನಜನಿತರಾಗಿರುವ ದಿಲ್ಲಿ ಮೆಟ್ರೊ ರೈಲು ವಿಭಾಗದ ಮಾಜಿ ಮುಖ್ಯಸ್ಥ ಇ.ಶ್ರಿಧರನ್ ತಳ್ಳಿಹಾಕಿದ್ದಾರೆ.
ಇಂತಹ ಯಾವುದೇ ಬೆಳವಣಿಗೆ ಸಂಭವಿಸಿಲ್ಲ ಅಲ್ಲದೆ ತನಗೆ ಇಂತಹ ಯಾವುದೇ ಬಯಕೆಯೂ ಇಲ್ಲ ಎಂದಿರುವ ಅವರು, ಇಂತಹ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ಈ ಬಗ್ಗೆ ಚರ್ಚೆ ಕೂಡಾ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದಕ್ಕೂ ಮುನ್ನ, ರಾಷ್ಟ್ರಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಪ್ರಯತ್ನ ಮುಂದುವರಿಸಿರುವ ಸರಕಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿತು. ಆದರೆ ಯಾವುದೇ ವ್ಯಕ್ತಿಯ ಹೆಸರನ್ನು ಉಭಯ ಕಡೆಯವರೂ ಮುಂದಿಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಮುಖಂಡರು ಯಾವ ಹೆಸರನ್ನೂ ಪ್ರಸ್ತಾವಿಸದೆ ವಿಪಕ್ಷಗಳು ಸಹಕಾರ ನೀಡಬೇಕೆಂದು ಹೇಳುತ್ತಿದ್ದಾರೆ. ನಾವು ಹೆಸರನ್ನು ಸೂಚಿಸಲಿ ಎಂದವರು ಬಯಸುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಝಾದ್ ಹೇಳಿದ್ದಾರೆ.
ಮಹಾತ್ಮಾಗಾಂಧಿಯವರ ಮೊಮ್ಮಗ ಮತ್ತು ಪ.ಬಂಗಾಲದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ, ಜೆಡಿಯು ಮುಖಂಡ ಶರದ್ ಯಾದವ್ ಮತ್ತು ಮಾಜಿ ಸ್ಪೀಕರ್ ಮೀರಾ ಕುಮಾರ್ ಹೆಸರು ರಾಷ್ಟ್ರಪತಿ ಹುದ್ದೆಗೆ ಕೇಳಿಬರುತ್ತಿದೆ.







