ಕಡ್ತಲ ಶಿಕಾರಿ ಕೊಲೆ ಪ್ರಕರಣ: ಮತ್ತೋರ್ವನ ಸೆರೆ

ಅಜೆಕಾರು, ಜೂ.16: ಎಳ್ಳಾರೆ ಗ್ರಾಮದ ಪಾಲ್‌ಜೆಡ್ಡುವಿನಲ್ಲಿರುವ ಕಡ್ತಲ ಮೀಸಲು ಅರಣ್ಯದಲ್ಲಿ ಶಿಕಾರಿ ವೇಳೆ ನಡೆದ ರವಿ ಯಾನೆ ರವೀಂದ್ರ ನಾಯ್ಕ (28) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯಕ್ಕೆ ಬಳಸಿದ ಬಂದೂಕಿನ ಪರವಾನಿಗೆದಾರನನ್ನು ಅಜೆಕಾರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಪಾಲ್‌ಜೆಡ್ಡುವಿನ ಐತು ನಾಯ್ಕ(65) ಎಂದು ಗುರುತಿಸಲಾಗಿದೆ. ಬಂದೂಕು ಬಳಸಲು ಪರವಾನಿಗೆ ಇಲ್ಲದ ಸುಂದರ ನಾಯ್ಕ(45) ಮತ್ತು ಜೀತು ನಾಯ್ಕ(25)ಗೆ ಬಂದೂಕು ನೀಡಿ ರವಿ ನಾಯ್ಕಾ ಕೊಲೆಗೆ ಕಾರಣರಾದ ಆರೋಪದಲ್ಲಿ ಐತು ನಾಯ್ಕನನ್ನು ಬಂಧಿಸಲಾಗಿದೆ. ಬಂಧಿತರ ವಿರುದ್ಧ ಅಜೆಕಾರು ಠಾಣೆಯಲ್ಲಿ ಕಲಂ: 302, ಜೊತೆಗೆ 34 ಐಪಿಸಿ ಮತ್ತು ಕಲಂ: 3,25,30,5(2) ಇಂಡಿಯನ್ ಆರ್ಮ್ಸ್ ಕಾಯಿದೆ ಹಾಗೂ ಕಲಂ: 24(ಜೆ), 9 ಕೆ.ಎಫ್. ಕಾಯಿದೆಯಂತೆ ಪ್ರಕರಣ ದಾಖ ಲಾಗಿದೆ. ಕೃತ್ಯಕ್ಕೆ ಬಳಸಿದ ಬಂದೂಕು ಮತ್ತು ಬಾಕಿ ಉಳಿದಿರುವ ಮದ್ದು ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಜೆಕಾರು ಪೊಲೀಸರು ಇಂದು ಕಾರ್ಕಳ ನ್ಯಾಯಾ ಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಮರ ಕಡಿದವರ ಸೆರೆ: ಮೃತ ರವಿ ನಾಯ್ಕ ಜೊತೆ ಅಕ್ರಮವಾಗಿ ಮರ ಕಡಿದ ಆರೋಪದಲ್ಲಿ ಪಾಲ್‌ಜೆಡ್ಡುವಿನ ಕೃಷ್ಣಕಾಂತ, ಉದಯ ನಾಯ್ಕ, ಸಂತೋಷ್ ಪೂಜಾರಿ, ನಿತೇಶ್ ಎಂಬವರನ್ನು ಕಾರ್ಕಳ ವಲಯ ಅರಣ್ಯ ಇಲಾಖೆಯವರು ಬಂಧಿಸಿ ಇಂದು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದಾರೆ.
ಮೀಸಲು ಅರಣ್ಯದಲ್ಲಿರುವ ಎರಡು ಕಿರಾಲ್‌ಬೋಗಿ ಮರಗಳನ್ನು ಕಡಿದು ಹಾಕಿರುವ ಈ ನಾಲ್ವರ ವಿರುದ್ಧ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿ ಸಿದ್ದಾರೆ. ನ್ಯಾಯಾಲಯ ಎಲ್ಲ ಆರೋಪಿಗಳನ್ನು ಜಾಮೀನು ನೀಡಿ ಬಿಡುಗಡೆಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.