ಮಂಗಳೂರಿನಲ್ಲಿ ಇನ್‌ಕ್ಯುಬೇಶನ್ ಸೆಂಟರ್ ಆರಂಭ

ಮಂಗಳೂರು, ಜೂ. 16: ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯನ್ನು ಕೇಂದ್ರ ಸರಕಾರ ಆರಂಭಿಸಿದ್ದು, ಈ ಯೋಜನೆಯಡಿ ಮಂಗಳೂರಿನಲ್ಲಿ ಇನ್‌ಕ್ಯುಬೇಶನ್ ಸೆಂಟರ್ ಆರಂಭಿಸಲಾಗುವುದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮ್ ತಿಳಿಸಿದ್ದಾರೆ.
ನಗರದ ಮಲ್ಲಿಕಟ್ಟೆಯಲ್ಲಿರುವ ಮಹಾನಗರ ಪಾಲಿಕೆಯ ಉಪ ಕಚೇರಿಯ ಕಟ್ಟಡದಲ್ಲಿ ನೂತನ ಕೇಂದ್ರ ಕಾರ್ಯಾಚರಿಸಲಿ ರುವ ಸ್ಥಳವನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಕೇಂದ್ರದ ಮೂಲ ಸೌಕರ್ಯಕ್ಕೆ ಸಂಸದರ ನಿಧಿಯಿಂದ 1.18 ಕೋಟಿ ರೂ. ಒದಗಿಸಲಾಗುತ್ತಿದ್ದು, ಅಗತ್ಯಬಿದ್ದಲ್ಲಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದರು. ಈ ಕೇಂದ್ರದಡಿ ಹೊಸ ಸ್ಟಾರ್ಟ್‌ಅಪ್(ಉದ್ಯಮ) ಗಳನ್ನು ಆರಂಭಿಸುವವರಿಗೆ ಅಗತ್ಯ ತರಬೇತಿ, ಮೂಲಸೌಕರ್ಯ ಹಾಗೂ ಮಾರ್ಗದರ್ಶನ ಒದಗಿಸಲಾಗುವುದು ಎಂದರು. ಮುಂದಿನ ನಾಲ್ಕು ತಿಂಗಳಲ್ಲಿ ನೂತನ ಕೇಂದ್ರ ಕಾರ್ಯಾರಂಭಿಸಲಿದೆ. ಕೇಂದ್ರಕ್ಕೆ ಅಗತ್ಯ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ಸೂಚಿಸಲಾಗಿದೆ. ಸುರತ್ಕಲ್‌ನ ಎನ್‌ಐಟಿಕೆ ಮತ್ತು ನಿಟ್ಟೆ ವಿವಿಗಳು ನೀತಿ ಆಯೋಗದಡಿ ಸ್ಟಾರ್ಟ್‌ಅಪ್‌ಗೆ ತರಬೇತುಗೊಳಿಸುತ್ತಿವೆ. ಈ ಕೇಂದ್ರಗಳಿಗೆ ಪೂರಕವಾಗಿ ಇಂಕ್ಯುಬೇಶನ್ ಸೆಂಟರ್ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.
ಪ್ರಥಮ ಹಂತದಲ್ಲಿ ಕನಿಷ್ಠ 60 ಸ್ಟಾರ್ಟ್‌ಅಪ್‌ಗಳು ಇಲ್ಲಿ ಆರಂಭಿಸಲು ಅವಕಾಶ ದೊರೆಯಬಹುದು. ಉದ್ದಿಮೆ ಆರಂಭಿಸಲು ಅಪೇಕ್ಷಿಸುವವರು ಕಡಿಮೆ ಹಾಗೂ ಮಧ್ಯಮ ಅವಧಿಗೆ ಈ ಅವಕಾಶವನ್ನು ಬಳಸಿಕೊಳ್ಳಬಹುದು. ಸ್ಟಾರ್ಟ್‌ಅಪ್ ಇನ್‌ಕ್ಯುಬೇಶನ್ ಸೆಂಟರ್‌ಗೆ ಮಂಗಳೂರು ಮಹಾನಗರ ಪಾಲಿಕೆ ಸೂಕ್ತ ಸ್ಥಳ ಒದಗಿಸಿಕೊಟ್ಟಿದೆ ಎಂದರು.
ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಮೇಯರ್‌ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್, ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಜಂಟಿ ಆಯುಕ್ತ ಗೋಕುಲ್‌ದಾಸ್ ಪ್ರಭು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಜೀವನ್ ಸಲ್ಡಾನ ಮೊದಲಾದವರು ಉಪಸ್ಥಿತರಿದ್ದರು.
ಚರ್ಮ ಉದ್ಯಮಕ್ಕೆ ಅಡ್ಡಿ ಇಲ್ಲ: ಜಾನುವಾರು ಮಾರಾಟ ನಿಷೇಧದಿಂದ ಚರ್ಮ ಉದ್ಯಮಕ್ಕೆ ಯಾವುದೇ ತೊಂದರೆ ಇಲ್ಲ . ಜಾನುವಾರು ಮಾರಾಟ ನಿಷೇಧಕ್ಕೂ ಚರ್ಮ ಉದ್ಯಮಕ್ಕೂ ಸಂಬಂಧವಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.







