ಉಚ್ಚಿಲ: ಕೇಂದ್ರ ಸರಕಾರದ ಸಾಧನಾ ಸಮಾವೇಶ

ಪಡುಬಿದ್ರಿ,ಜೂ.16: ಭಾರತದ ಕಾನೂನು ವ್ಯವಸ್ಥೆ ಒಳ್ಳೆಯದು. ಆದರೆ ಹಳೆಯದಾಗಿರುವ ಕೆಲವು ಕಾನೂನುಗಳನ್ನು ಪರಿಷ್ಕರಿಸಿ ಅರ್ಥಭರಿತ ಕಾನೂನು ರಚನೆಗೆ ಒತ್ತು ನೀಡುವುದು ನಮ್ಮ ಸರಕಾರದ ಧ್ಯೇಯವಾಗಿದೆ. ಕಾನೂನು ಪರಿಷ್ಕರಣೆಯಿಂದ ಯಾವುದೇ ಕ್ಷೇತ್ರದಲ್ಲೂ ವ್ಯವಸ್ಥಿತ ಅಭಿವೃದ್ಧಿ ನಡೆಸಲು ಸಾಧ್ಯವಾಗುತ್ತಿದೆ ಎಂದು ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಉಚ್ಚಿಲ ಶ್ರೀಮಹಾಲಕ್ಷ್ಮೀ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕೇಂದ್ರ ಸರಕಾರದ 3 ವರ್ಷದ ಯಶಸ್ವೀ ಆಡಳಿತದ ಸಂದರ್ಭ ನಡೆದ "ಸಬ್ ಕಾ ಸಾಥ್ ಸಬ್‌ಕಾ ವಿಕಾಸ್" ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಂಕಣ ರೈಲ್ವೇ ಪಥದಲ್ಲಿ ರೈಲುಗಳ ದಟ್ಟಣೆಯಿಂದಾಗಿ ನಿರಂತರ ಅಡಚಣೆಗಳು ಉಂಟಾಗುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಕೊಂಕಣ ರೈಲ್ವೇ ಪಥವನ್ನು ಶೀಘ್ರದಲ್ಲೇ ದ್ವಿಪಥಗೊಳಿಸಲಾಗುವುದು ಎಂದರು.
ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಅತ್ಯಂತ ಜವಾಬ್ದಾರಿಯುತ ತ್ವರಿತ ಸೇವೆ ಸಲ್ಲಿಸಿ ಅತೀ ಪುಟ್ಟ ಕಷ್ಟಗಳಿಗೂ ಸ್ಪಂದಿಸುವ ಈಗಿನ ವಿದೇಶಾಂಗ ಸಚಿವಾಲಯವನ್ನು ನಾನು ಹಿಂದೆಂದೂ ಕಂಡಿಲ್ಲ. ಬಡವನಿಗೆ ಮತ್ತು ಧನಿಕನಿಗೆ ಸಮಾನ ವ್ಯಾವಹಾರಿಕ ಹಕ್ಕು ನೀಡುವ ಸಲುವಾಗಿ ಜನಧನ್ ಯೋಜನೆ, ಮುದ್ರಾ ಯೋಜನೆಗಳು ಉತ್ಕೃಷ್ಟ ಫಲ ನೀಡಿವೆ.
ಕೇಂದ್ರ ಸರಕಾರದ ಕಾರ್ಯಪ್ರವೃತ್ತಿಯ ನೈಜ ಭಾವನೆ ಅರ್ಥವಾಗಬೇಕಾದರೆ 2014ರ ಚುನಾವಣೆ ಸಂದರ್ಭ ಮತ್ತು ಈಗಿನ ಪರಿಸ್ಥಿತಿಯ ಅವಲೋಕನ ನಡೆಸಿ ನೋಡಬೇಕು. ಅಂದಿನ ಬಾರತದ ಚಿತ್ರಣ ಊಹಿಸಲೂ ಅಸಾಧ್ಯವಾದಂತಿತ್ತು. ಭಾರತದ ಬಗ್ಗೆ ಪ್ರತಿಯೊಬ್ಬರಿಗೂ ನಕರಾತ್ಮಕ ಅಭಿಪ್ರಾಯ, ದೇಶದ ವ್ಯವಸ್ಥೆಯೊಳಗೆ ದಲ್ಲಾಳಿಕೋರತನದ ಪ್ರಭಾವಗಳಿಂದಾಗಿ ದೇಶದ ಉದ್ದಿಮೆ ಕ್ಷೇತ್ರದ ದೊಡ್ಡ ಮಟ್ಟಿನ ಹೊಡೆತ ಬೀಳುತ್ತಿತ್ತು. ಇವೆಲ್ಲವುಗಳಿಗೆ, ಪ್ರತಿ ಯೋಜನೆ, ಬದಲಾವಣೆಯನ್ನು ವ್ಯವಸ್ಥಿತ ಮತ್ತು ಅರ್ಥಪೂರ್ಣ ರೀತಿಯಲ್ಲಿ ಅನುಷ್ಠಾನಗೊಳಿಸಿರುವ ಕಾರಣ ಇಂದು ದೇಶದ ಬಗ್ಗೆ ಪ್ರತಿ ವಿದೇಶಿಗರ ಮನಸ್ಥಿತಿ ಬದಲಾಗಿದೆ. ವಿಶ್ವಕ್ಕೆ ಭಾರತದ ಮೇಲೆ ನಂಬಿಕೆ ಹುಟ್ಟಿದೆ. ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ ನಮ್ಮ ಸಮಸ್ಯೆ ಆಗಿತ್ತು. ಆದರೆ ಇಂದು ಬಹುತೇಕ ಎಲ್ಲಾ ವಿಧದಲ್ಲೂ ಭ್ರಷ್ಟಾಚಾರ ನಿಗ್ರಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಅಳವಡಿಸಿಕೊಳ್ಳುತ್ತಿರುವುದರಿಂದ ಭಾರತದಲ್ಲಿ ಹಣ ಹೂಡಿಕೆ ಹೆಚ್ಚಾಗುತ್ತಿದೆ ಎಂದರು.
ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಶೇ.138ರಷ್ಟು ಬಂಡವಾಳ ಹೂಡಿಕೆ ಹೆಚ್ಚಾಗಿದ್ದು, ನಿರ್ಮಲಾ ಸೀತಾರಾಮನ್ ರಂತಹ ಸಚಿವೆಯಿಂದ ಸಾಧ್ಯವಾಗಿದೆ. ಕಳೆದ ಮೂರು ವರ್ಷದ ಹಿಂದೆ ಏನು ಹೇಳಿದ್ದೇವೆ ಮತ್ತು ಅಂದಿನಿಂದ ಇಂದಿನವರೆಗೆ ಏನು ಮಾಡಿದ್ದೇವೆ ಎಂಬುದರ ಬಗ್ಗೆ ಮರುಚಿಂತನೆ ನಡೆಸಬೇಕೆಂಬುವುದು ಪ್ರಧಾನಿಯವರ ಅಪೇಕ್ಷೆ. ಪ್ರಪಂಚದ ನೇತೃತ್ವವನ್ನು ಭಾರತದ ಪ್ರಧಾನಿ ವಹಿಸಬೇಕು ಎನ್ನುವಂತಹ ಅಭಿಮತ ಕೇಳಿ ಬರುತ್ತಿದೆ ಎಂದು ಹೇಳಿದರು.







