ತನ್ನ ನಿವಾಸದ 50 ಮೀ. ದೂರಕ್ಕೂ ತಲುಪದ ಪ್ರಧಾನಿ ಮೋದಿಯ ಸ್ವಚ್ಛ ಭಾರತ ಘೋಷಣೆ

ಹೊಸದಿಲ್ಲಿ,ಜೂ.16: ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಸಂದರ್ಭ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿದ್ದ ಚಿತ್ರಗಳು ಜನರ ನೆನಪಿನಲ್ಲಿ ಇನ್ನೂ ಹಸಿರಾಗಿವೆ. 2014,ಅ.2,ಮಹಾತ್ಮಾ ಗಾಂಧೀಜಿಯವರ ಜನ್ಮದಿನದಂದು ನಂ.7,ರೇಸ್‌ಕೋರ್ಸ್ ರಸ್ತೆಯ ತನ್ನ ಅಧಿಕೃತ ನಿವಾಸ ದಿಂದ ಐದು ಕಿ.ಮೀ.ದೂರದ ವಾಲ್ಮೀಕಿ ಬಸ್ತಿಯಲ್ಲಿ ಮೋದಿ ಖುದ್ದು ಕೈಯಲ್ಲಿ ಕಸಬರಿಗೆ ಹಿಡಿದುಕೊಂಡು ಎನ್‌ಎಂಡಿಸಿಯ ಪೌರಕಾರ್ಮಿಕರೊಂದಿಗೆ ಸೇರಿಕೊಂಡು ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಅಭಿಯಾನಕ್ಕೆ ನಾಂದಿ ಹಾಡಿದ್ದರು.
ಈಗ ಸುಮಾರು ಮೂರು ವರ್ಷಗಳ ಬಳಿಕ ಮೋದಿಯವರ ಅತ್ಯಂತ ಬಿಗು ಭದ್ರತೆಯ ನಿವಾಸದ ಮುಖ್ಯ ಪ್ರವೇಶ ದ್ವಾರದಿಂದ ಕೇವಲ 50 ಮೀ.ಅಂತರದಲ್ಲಿರುವ, ಕೊಳಚೆಯ ನಡುವೆಯೇ 400ಕ್ಕೂ ಅಧಿಕ ಕುಟುಂಬಗಳು ವಾಸವಾಗಿರುವ, ರೇಸ್‌ಕೋರ್ಸ್ ರಸ್ತೆಯಲ್ಲಿನ ಬಿ.ಆರ್.ಕ್ಯಾಂಪ್ ಪ್ರಧಾನಿಯವರ ಸ್ವಚ್ಛ ಭಾರತ ಅಭಿಯಾನವನ್ನು ಅಣಕಿಸುತ್ತಿದೆ. ಅವರ ಸ್ವಚ್ಛ ಭಾರತ ಮಂತ್ರ ಎದುರಿನಲ್ಲಿಯೇ ಇರುವ ಈ ಕೊಳಗೇರಿಯ ಮೇಲೆ ಯಾವುದೇ ಪರಿಣಾಮವನ್ನು ಬೀರಿಯೇ ಇಲ್ಲ.
ದುರ್ನಾತದ ಆಗರವಾಗಿರುವ ಈ ಪ್ರದೇಶದಲ್ಲಿರುವ ಕುಟುಂಬಗಳು ಸುಮಾರು 50 ವರ್ಷಗಳಿಂದಲೂ ಇಲ್ಲಿ ವಾಸವಾಗಿವೆ. ಇಲ್ಲಿಯ ನೈಮರ್ಲ್ಯ ಮತ್ತು ಸ್ವಚ್ಛತೆ ಸ್ಥಿತಿ ಸದಾ ಹದಗೆಟ್ಟಿಯೇ ಇರುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಪರಿಸ್ಥಿತಿ ತೀರ ಹದಗೆಟ್ಟಿದೆ ಎನ್ನುತ್ತಾರೆ ಇಲ್ಲಿಯ ನಿವಾಸಿಗಳು.
ದಿಲ್ಲಿ ರೇಸ್‌ಕ್ಲಬ್‌ನ ಆವರಣ ಗೋಡೆಗೆ ಹೊಂದಿಕೊಂಡೇ ಈ ಕೊಳಗೇರಿಯಿದೆ. ಇಲ್ಲಿಂದ ಕೊಳಚೆ ಈ ಗೋಡೆಯುದ್ದಕ್ಕೂ ಸಾಗಿರುವ ಚರಂಡಿಗಳು ಮತ್ತು ಪೈಪ್‌ಗಳ ಮೂಲಕ ಹೋಗುತ್ತಿತ್ತು. ಇತ್ತೀಚಿಗೆ ಕ್ಲಬ್‌ನ ಅಧಿಕಾರಿಗಳು ಈ ಎಲ್ಲ ಚರಂಡಿಗಳನ್ನು ಮುಚ್ಚಿದ್ದಾರೆ, ಜೊತೆಗೆ ಕೊಳವೆಗಳನ್ನೂ ಒಡೆದು ಹಾಕಿದ್ದಾರೆ.
ಆವರಣ ಗೋಡೆಯ ಮೇಲೆ ಈಗ ಸುರುಳಿಯಾಕಾರದ ಮುಳ್ಳುತಂತಿಗಳನ್ನು ಅಳವಡಿ ಸಲಾಗಿದೆ. ಹೀಗಾಗಿ ಈ ಗೋಡೆಯನ್ನು ದಾಟಿ ಮುಚ್ಚಿರುವ ಚರಂಡಿಗಳನ್ನು ಮತ್ತೆ ತೆರೆಯಲು ಇಲ್ಲಿಯ ನಿವಾಸಿಗಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪ್ರದೇಶದಲ್ಲಿ ಉತ್ಪತ್ತಿಯಾಗುವ ಕೊಳಚೆ ಎಲ್ಲಿಯೂ ಹೋಗಲು ಸಾಧ್ಯವಾಗದೇ ಇಲ್ಲಿಯೇ ಮಡುವು ಗಟ್ಟಿದೆ.
ಕ್ಯಾಂಪ್‌ನ ಮಧ್ಯ ಇರುವ ಶಿಥಿಲಾವಸ್ಥೆಯಲ್ಲಿನ ಸಾಮೂಹಿಕ ಶೌಚಾಲಯ ಸಂಕೀರ್ಣ ತ್ಯಾಜ್ಯದ ರಾಶಿಯಂತೆ ಕಾಣುತ್ತಿದೆ. ಕ್ಯಾಂಪ್‌ನೊಳಗೆ ಇರುವ ಚರಂಡಿಗಳು ಕೊಳಚೆ ಮತ್ತು ತ್ಯಾಜ್ಯಗಳಿಂದ ತುಂಬಿಹೋಗಿದ್ದು, ಪರಿಸರವಿಡೀ ಅಸಾಧ್ಯ ದುರ್ನಾತ ಬೀರುತ್ತಿದೆ. ಇಲ್ಲಿ ಯಾವುದೇ ಸಮಯದಲ್ಲಿಯೂ ಸೋಂಕು ರೋಗಗಳು ಹಬ್ಬುವ ಅಪಾಯವಿದೆ.
ಈ ಕ್ಯಾಂಪ್‌ನಲ್ಲಿ ಒಂದು ಸುತ್ತು ಹೊಡೆದರೆ ತೆರೆದ,ಕೊಳಚೆ ಮಡುವುಗಟ್ಟಿದ ಚರಂಡಿಗಳ ಸಮೀಪದಲ್ಲಿಯೇ ಮಹಿಳೆಯರು ಪಾತ್ರೆಗಳು ಮತ್ತು ಬಟ್ಟೆಗಳನ್ನು ತೊಳೆಯುತ್ತಿರುವ, ಅಡುಗೆ ಮಾಡುತ್ತಿರುವ ದೃಶ್ಯಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಕೆಲವರು ಸಾರ್ವಜನಿಕ ನಲ್ಲಿಗಳಿಂದ ಹನಿಹನಿಯಾಗಿ ಬೀಳುವ ಕುಡಿಯುವ ನೀರು ಸಂಗ್ರಹಿಸುವ, ಪುಟ್ಟಮಕ್ಕಳು ಚರಂಡಿಗಳ ಬಳಿಯೇ ಆಟವಾಡುವ ದೃಶ್ಯಗಳು ಇಲ್ಲಿ ಸಾಮಾನ್ಯ. ಈ ಮಕ್ಕಳು ಚರಂಡಿಯಲ್ಲಿ ಬೀಳುವ ಸಾಧ್ಯತೆಗಳಿವೆಯಾದರೂ ತುತ್ತ್ತಿನ ಚೀಲಗಳನ್ನು ತುಂಬಿಸಿಕೊಳ್ಳಲು ಹೆಣಗಾಡುತ್ತಿರುವ ಹೆತ್ತವರಿಗೆ ಮಕ್ಕಳ ಬಗ್ಗೆ ಗಮನ ಹರಿಸಲೂ ಸಾಧ್ಯವಾಗುತ್ತಿಲ್ಲ.
ನೈರ್ಮಲ್ಯ ಸ್ಥಿತಿ ದಿನೇ ದಿನೇ ಹದಗೆಡುತ್ತಿರುವುದು ಇಲ್ಲಿಯ ನಿವಾಸಿಗಳನ್ನು ಕಂಗೆಡಿಸಿದೆ. ಚರಂಡಿಯಿಂದ ಕೊಳಚೆ ನೀರು ಹೊರಕ್ಕೆ ಬಂದು ಹತ್ತಿರದ ಮನೆಗಳನ್ನು ಸೇರಿಕೊಳ್ಳುತ್ತಿದೆ. ಅದನ್ನು ತೆರವು ಮಾಡುವುದರಲ್ಲಿಯೇ ಜನರ ಸಮಯ ಕಳೆದು ಹೋಗುತ್ತಿದೆ.
ಇಲ್ಲಿಯ ಸಾರ್ವಜನಿಕ ಶೌಚಾಲಯ ತುಂಬ ಶಿಥಿಲಗೊಂಡಿದ್ದು, ತುರ್ತು ದುರಸ್ತಿಯ ಅಗತ್ಯವಿದೆ. ಇದರ ಗೋಡೆಗಳಲ್ಲಿ ಹತ್ತಿರದ ಮರಗಳ ಬೇರುಗಳು ತೂರಿಕೊಂಡಿವೆ. ಛಾವಣಿಯ ಮೇಲೂ ಗಿಡಗಳು ಬೆಳೆದಿದ್ದು ಅವುಗಳ ಬೇರುಗಳು ಕೆಳಕ್ಕಿಳಿದಿವೆ. ಹೀಗಾಗಿ ಇಡಿ ಶೌಚಾಲಯವೇ ಕುಸಿದು ಬೀಳುವ ಸಾಧ್ಯತೆಗಳು ದಟ್ಟವಾಗಿವೆ.
ಇದು ಪ್ರಧಾನಿ ನಿವಾಸದ ಎದುರಿನಲ್ಲಿಯೇ ಇರುವ ‘ಸ್ವಚ್ಛ ಭಾರತ’!







