ಉಡುಪಿ ಪ್ರವಾಸವನ್ನು ರಾಷ್ಟ್ರಪತಿ ಮರು ಪರಿಶೀಲಿಸಲಿ: ಸರಕಾರಿ ಆಸ್ಪತ್ರೆ ಉಳಿವಿಗಾಗಿ ಒಕ್ಕೂಟ ಮನವಿ

ಉಡುಪಿ, ಜೂ.17: ಅನಿವಾಸಿ ಭಾರತೀಯ ಉದ್ಯಮಿ ಡಾ.ಬಿ.ಆರ್. ಶೆಟ್ಟಿ ಕಾನೂನು ಬಾಹಿರವಾಗಿ ನಿರ್ಮಿಸುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ಶಂಕು ಸ್ಥಾಪನೆ ನೆರವೇರಿಸಲು ಆಗಮಿಸುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಪ್ರವಾಸವನ್ನು ಮರು ಪರಿಶೀಲಿಸಬೇಕು ಎಂದು 'ಉಡುಪಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆ' ಉಳಿವಿಗಾಗಿ ಒಕ್ಕೂಟದ ಸಂಚಾಲಕ ಡಾ.ಪಿ.ವಿ. ಭಂಡಾರಿ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಿಆರ್‌ಎಸ್ ಹೆಲ್ತ್ ಆ್ಯಂಡ್ ರಿಸರ್ಚ್ ಇನ್ಸಿಟ್ಯೂಟ್ ಪ್ರೈವೆಟ್ ಲಿಮಿಟೆಡ್‌ಗೆ ಹಸ್ತಾಂತರಿಸಿರುವುದರಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಸಾರ್ವಜನಿಕ ಹಿತಾ ಸಕ್ತಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ.
ಈ ಕುರಿತು ಕಾನೂನು ಬಾಹಿರವಾಗಿ ಮಾಡಿಕೊಂಡ ಒಪ್ಪಂದ ಮತ್ತು ಗುತ್ತಿಗೆಯನ್ನು ರದ್ದುಪಡಿಸುವಂತೆ ಉಡುಪಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ದಾಖಲಿಸಿದ್ದು, ಅದು ವಿಚಾರಣೆ ಹಂತದಲ್ಲಿದೆ ಎಂದರು.
ರಾಷ್ಟ್ರಪತಿ ಈ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಿದ್ದಲ್ಲಿ ಕಾನೂನು ಬಾಹಿರ ವ್ಯವಹಾರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಅಲ್ಲದೆ ಕಾನೂನು ಮೂಲಕ ನ್ಯಾಯವನ್ನು ಕೋರುತ್ತಿರುವ ಉಡುಪಿಯ ನಾಗರಿಕರ ಭಾವನೆಗೆ ಧಕ್ಕೆಯಾಗುತ್ತದೆ. ಹಾಗಾಗಿ ರಾಷ್ಟ್ರಪತಿ ಈ ಕಾರ್ಯಕ್ರಮದಲ್ಲಿ ಭಾಗವಹಿಸದೆ ಪ್ರಜಾಪ್ರಭುತ್ವದಲ್ಲಿನ ನಂಬಿಕೆಯನ್ನು ಹೆಚ್ಚಿಸಬೇಕು ಎಂದು ಅವರು ಹೇಳಿದರು.
ಬಾಲಕೃಷ್ಣ ಶೆಟ್ಟಿ ಮಾತನಾಡಿ, ದೇಶದಲ್ಲಿ ಕಾರ್ಪೊರೇಟ್ ಕಂಪೆನಿಗಳ ಹಿಡಿತ ಹೆಚ್ಚಾಗುತ್ತಿದೆ ಎಂಬುದಕ್ಕೆ ಈ ಬೆಳವಣಿಗೆಯು ಸ್ಪಷ್ಟ ನಿರ್ದಶನವಾಗಿದೆ. ರಾಷ್ಟ್ರಪತಿ ಶಂಕುಸ್ಥಾಪನೆ ನಡೆಸಿ ಹೋದರೂ ಕೂಡ ಇದರ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಜಿ.ರಾಜಶೇಖರ್ ಮಾತನಾಡಿ, ಆರೋಗ್ಯ ಎಂಬುದು ಜನರ ಹಕ್ಕಾಗಬೇಕೆ ಹೊರತು ಉದ್ಯಮಿಗಳ ಔದರ್ಯ ಅಥವಾ ದಾನ ಆಗಬಾರದು. ಆದುದರಿಂದ ರಾಷ್ಟ್ರಪತಿ ಈ ಕುರಿತು ಮನವರಿಕೆ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿದೆ ಎಂದು ಹೇಳಿದರು.
ಯೋಗೇಶ್ ಶೇಟ್ ಮಾತನಾಡಿ, ಸರಕಾರಿ ಆಸ್ಪತ್ರೆಗೆ ಸಂಬಂಧಿಸಿದ ದಾಖಲೆ ಗಳನ್ನು ರಾಷ್ಟ್ರಪತಿ ಹಾಗೂ ಗುಪ್ತಚಾರ ಇಲಾಖೆಗೆ ನೀಡಿದ್ದೇವೆ. ನಿನ್ನೆ ಮನೆಗೆ ಆಗಮಿಸಿದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳಿಗೂ ದಾಖಲೆಗಳನ್ನು ನೀಡಿ ರಾಷ್ಟ್ರಪತಿಯನ್ನು ಇಲ್ಲಿಗೆ ಕರೆಸಬಾರದು ಎಂದು ಹೇಳಿದ್ದೇನೆ. ಸರಕಾರಿ ಆಸ್ಪತ್ರೆಗೆ ಸಂಬಂಧಿಸಿದ ಮಹತ್ವದ ದಾಖಲೆ ಸದ್ಯವೇ ಸಿಗಲಿದ್ದು, ಅದನ್ನು ನ್ಯಾಯಾಲಯ ಹಾಗೂ ಉಡುಪಿ ಜನರ ಮುಂದೆ ಇಡಲಾಗುವುದು. ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಅವಕಾಶ ನೀಡಬಾರದೆಂದು ಪೇಜಾವರ ಸ್ವಾಮೀಜಿಗೆ ಪತ್ರ ಬರೆದು ಮನವಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ನಿತ್ಯಾನಂದ ಒಳಕಾಡು, ಇಕ್ಬಾಲ್ ಮನ್ನಾ, ಕೆ.ವಿ.ಭಟ್, ಸಲಾವುದ್ದೀನ್, ಕಿಶೋರ್ ಶೆಟ್ಟಿ ಉಪಸ್ಥಿತರಿ ದ್ದರು.