ಪೊಲೀಸ್ ದೌರ್ಜನ್ಯಕ್ಕೆ ಮುಸ್ಲಿಂ ವರ್ತಕರ ಸಂಘ ಖಂಡನೆ
ಮಂಗಳೂರು, ಜೂ.17: ಕಲ್ಲಡ್ಕದ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಯ ನೆಪದಲ್ಲಿ ಪೊಲೀಸರು ತಡರಾತ್ರಿ ಪುರುಷರಿಲ್ಲದ ವೇಳೆ ಮನೆಗೆ ನುಗ್ಗಿ ಮುಸ್ಲಿಮ್ ಮಹಿಳೆಯರ ಮೇಲೆ ನಡೆಸಿದ ಅಮಾನವೀಯ ದೌರ್ಜನ್ಯವನ್ನು ಮುಸ್ಲಿಂ ವರ್ತಕರ ಸಂಘ ಖಂಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯ ಕ್ಷೇತ್ರದಲ್ಲೇ ಪವಿತ್ರ ರಮಝಾನ್‌ನಲ್ಲೇ ಇಂತಹ ದೌರ್ಜನ್ಯ ನಡೆದಿದ್ದರೂ ಕೂಡ ಅವರಿನ್ನೂ ವೌನ ಮುರಿಯದಿದ್ದುದು ಖಂಡನೀಯ.
ಮುಸ್ಲಿಮರ ಪರ ತಾವಿದ್ದೇವೆ ಎಂದು ಹೇಳುವ ಕಾಂಗ್ರೆಸ್ ಪಕ್ಷದ ಮುಖಂಡರೂ ಕೂಡ ಈ ಬಗ್ಗೆ ವೌನ ತಾಳಿರುವುದು ವಿಪರ್ಯಾಸ. ಇಂತಹ ಘಟನೆಗಳು ಸಂಭವಿಸಿದಾಗಲೆಲ್ಲಾ ಹಿರಿಯ ಅಧಿಕಾರಿಗಳು ನ್ಯಾಯಯುತ ರೀತಿಯಲ್ಲಿ ತನಿಖೆ ಮಾಡಲಾಗುವುದು ಎಂದು ನೀಡುವ ಭರವಸೆಗಳು ಇದೀಗ ಹುಸಿಯಾಗುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ವೌನ ಮುರಿಯಬೇಕು ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಮತ್ತು ರಕ್ಷಣೆ ನೀಡಬೇಕು ಎಂದು ಸಂಘದ ಅಧ್ಯಕ್ಷ ಆಲಿಹಸನ್ ಒತ್ತಾಯಿಸಿದ್ದಾರೆ.
Next Story





