ಕೃಷಿ ತೋಟಗಾರಿಕಾ ವಿವಿ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಕೃಷಿ ಸಚಿವರಿಂದ ಶಿಲಾನ್ಯಾಸ

ಶಿವಮೊಗ್ಗ, ಜೂ. 17: ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದಲ್ಲಿ 777.7 ಎಕರೆ ಪ್ರದೇಶದಲ್ಲಿ ಕೃಷಿ ತೋಟಗಾರಿಕಾ ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಶನಿವಾರ ಬೆಳಿಗ್ಗೆ ಕೃಷಿ ಸಚಿವ ಕೃಷ್ಣ ಭೈರೇಗೌಡ ಶಿಲಾನ್ಯಾಸ ನೆರವೇರಿಸಿದರು.
ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ’ಕೃಷಿ ತೋಟಗಾರಿಕೆ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ 250 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಪ್ರಸ್ತುತ ಮೊದಲ ಹಂತದಲ್ಲಿ ವಿವಿಗೆ ತುರ್ತು ಅಗತ್ಯವಿರುವ ಕಟ್ಟಡ ನಿರ್ಮಾಣಕ್ಕೆ ಸರ್ಕಾರವು 150 ಕೋಟಿ ರೂ. ಬಿಡುಗಡೆ ಮಾಡಿದೆ’ ಎಂದು ಮಾಹಿತಿ ನೀಡಿದರು. 2 ನೇ ಹಂತದಲ್ಲಿ ವಿವಿಯ ಕಟ್ಟಡ ಹಾಗೂ ಮೂಲಸೌಕರ್ಯ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಅಗತ್ಯವಾದ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಪ್ರಥಮ ಹಂತದಲ್ಲಿ ಅಗತ್ಯ ಮೂಲಸೌಕರ್ಯವನ್ನೊಳಗೊಂಡ ಕ್ಯಾಂಪಸ್ ಕೆಲವೇ ತಿಂಗಳುಗಳಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ವಿವಿಯು ಮಲೆನಾಡು ಮತ್ತು ಕರಾವಳಿ ರೈತರ ಆಗತ್ಯತೆಗಳಿಗೆ ಹೆಚ್ಚು ಸ್ಪಂದಿಸುವ ನಿಟ್ಟಿನಲ್ಲಿ ಒತ್ತು ನೀಡುವಂತೆ ವಿವಿ ಕುಲಪತಿಗೆ ತಿಳಿಸಲಾಗಿದೆ. ಇದೊಂದು ಮಾದರಿ ವಿವಿಯಾಗಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿಯೂ ಗಮನಹರಿಸುವಂತೆ ಸೂಚಿಸಲಾಗಿದೆ ಎಂದರು. ಕೃಷಿ ಕ್ಷೇತ್ರದ ಸರ್ವಾಂಗೀಣ ಬೆಳವಣಿಗೆಗೆ ರಾಜ್ಯ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿಯೂ ಪ್ರಾಮಾಣಿಕ ಗಮನಹರಿಸಲಾಗಿದೆ ಎಂದು ತಿಳಿಸಿದರು.
ಬದಲಾದ ಪರಿಸ್ಥಿತಿ, ಹವಾಗುಣಕ್ಕೆ ಅನುಗುಣವಾಗಿ ರೈತರು ಬೆಳೆ ಬೆಳೆಯಬೇಕು. ಕೃಷಿ ವಿವಿಗಳು ಕೂಡ ಈ ನಿಟ್ಟಿನಲ್ಲಿ ರೈತರಿಗೆ ಕಾಲಕಾಲಕ್ಕೆ ಸಲಹೆ - ಸೂಚನೆ ನೀಡಬೇಕು. ರೈತರಿದ್ದಲ್ಲಿಗೆ ತೆರಳಿ ಸಹಾಯಹಸ್ತ ಚಾಚುವ ಕೆಲಸ ಮಾಡಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ನಾಲ್ಕು ವರ್ಷಗಳ ಸಾಧನೆ ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಬಿಡುಗಡೆ ಮಾಡಿದರು.







