ಭಡ್ತಿ ಮೀಸಲಾತಿ ರಕ್ಷಣೆಗೆ ಸುಗ್ರೀವಾಜ್ಞೆ ಹೊರಡಿಸಲು ಚಿಂತನೆ: ಸಿದ್ದರಾಮಯ್ಯ

ಬೆಂಗಳೂರು,ಜೂ.17: ಸುಪ್ರೀಂ ಕೋರ್ಟಿನ ಭಡ್ತಿ ಮೀಸಲಾತಿ ತೀರ್ಪಿನ ವಿರುದ್ಧ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಕುರಿತು ಮಾತುಕತೆ ನಡೆಸಿತು.
ಭಡ್ತಿ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ರಾಜ್ಯದ 16 ಸಾವಿರ ಸರಕಾರಿ ನೌಕರರು ಹಿಂಭಡ್ತಿ ಪಡೆಯುವ ಸಾಧ್ಯತೆಗಳಿವೆ. ಇದನ್ನು ತಪ್ಪಿಸಲು ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕು. ರಾಜ್ಯ ಸರಕಾರ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿ ಪ್ರಕರಣದಲ್ಲಿ ವಾದ ಮಂಡಿಸಲು ಸಮರ್ಥ ವಕೀಲರನ್ನು ನೇಮಕ ಮಾಡಬೇಕು ಎಂದು ನಿಯೋಗ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆ ಮಾಡಿ ಅದರ ಆಧಾರದ ಮೇಲೆ ಜಾತಿ ಆಧಾರಿತ ಮೀಸಲು ಪ್ರಮಾಣವನ್ನು ಶೇ.70ಕ್ಕೆ ಹೆಚ್ಚಿಸಬೇಕು. ಸದಾಶಿವ ಆಯೋಗ ವರದಿಯನ್ನು ಸರಕಾರ ಅಂಗೀಕರಿಸಿ ಆದೇಶ ಹೊರಡಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ನಿಯೋಗ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿತು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಪರಿಶಿಷ್ಟ ನೌಕರರ ಹಿಂಭಡ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಕುರಿತು ಚಿಂತನೆ ನಡೆಸುವುದರ ಜೊತೆಗೆ ಬೇಡಿಕೆಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಕಲಾಪ ಮುಗಿದ ಬಳಿಕ ದಲಿತ ಶಾಸಕರು ಮತ್ತು ಮುಖಂಡರ ಜೊತೆ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶಾನುಸಾರ ಕೆಲ ಇಲಾಖೆಗಳಲ್ಲಿ ಹಿಂಭಡ್ತಿ ಕುರಿತು ಸಿದ್ದಪಡಿಸಿರುವ ಜ್ಯೇಷ್ಠತಾ ಪಟ್ಟಿಯನ್ನು ತಡೆಹಿಡಿಯುವ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ನಿಯೋಗದಲ್ಲಿ ಮುಖಂಡರಾದ ಲಕ್ಷ್ಮೀನಾರಾಯಣ ನಾಗವಾರ, ಮಾವಳ್ಳಿ ಶಂಕರ್, ಎನ್.ಮೂರ್ತಿ. ಶ್ರೀಧರ ಕಲಿವೀರ ಸೇರಿದಂತೆ ಇತರರು ಇದ್ದರು.







