ಅಲಂಕಾರಿಕ ಮೀನುಗಳ ಮಾರಾಟಕ್ಕೆ ನಿಷೇಧ: ಕೇಂದ್ರದ ಅಧಿಸೂಚನೆ ಹಿಂಪಡೆಯಲು ಕೇರಳ ಸರಕಾರ ಒತ್ತಾಯ

ತಿರುವನಂತಪುರಂ, ಜೂ.17: ಅಂಗಡಿಗಳಲ್ಲಿ ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟವನ್ನು ನಿಷೇಧಿಸಿರುವ ಕೇಂದ್ರ ಸರಕಾರದ ಅಧಿಸೂಚನೆಯಿಂದ ಲಕ್ಷಾಂತರ ಜನರು ಕೆಲಸ ಕಳೆದುಕೊಳ್ಳಲಿದ್ದು ಈ ಹಿನ್ನೆಲೆಯಲ್ಲಿ ಇದನ್ನು ತಕ್ಷಣ ಹಿಂಪಡೆಯುವಂತೆ ಕೇರಳ ಸರಕಾರ ಒತ್ತಾಯಿಸಿದೆ.
ಕೊಚ್ಚಿ ಮೆಟ್ರೋ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ ಪ್ರಧಾನಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಲ್ಲಿಸಿದ ಮನವಿ ಪತ್ರದಲ್ಲಿ ಈ ಪ್ರಮುಖ ಬೇಡಿಕೆಯೂ ಸೇರಿದೆ.ಅಲಂಕಾರಿಕ ಮೀನುಗಳ ಕುರಿತ ಅಧಿಸೂಚನೆಗೆ ಸಂಬಂಧಿಸಿ ಚರ್ಚೆ ನಡೆಸಲು ಎಲ್ಲಾ ರಾಜ್ಯಗಳ ಮೀನುಗಾರಿಕಾ ಸಚಿವರ ಸಭೆ ಕರೆಯುವಂತೆಯೂ ಅವರು ಒತ್ತಾಯಿಸಿದ್ದಾರೆ.
ಪಿಣರಾಯಿ ವಿಜಯನ್ ಸಲ್ಲಿಸಿದ ಮನವಿ ಪತ್ರದಲ್ಲಿ ಒಳಗೊಂಡಿರುವ ಪ್ರಮುಖ ಬೇಡಿಕೆಗಳಿವು: *ಕೇರಳದಲ್ಲಿ ಅಖಿಲ ಭಾರತ ವೈದ್ಯವಿಜ್ಞಾನ ಸಂಸ್ಥೆ (ಎಐಐಎಂಎಸ್) ಮತ್ತು ಅಂತರಾಷ್ಟ್ರೀಯ ಆಯುರ್ವೇದ ಸಂಸ್ಥೆ ಸ್ಥಾಪಿಸಬೇಕೆಂಬ ಬೇಡಿಕೆಗೆ ಶೀಘ್ರ ಅನುಮತಿ ನೀಡಬೇಕು.ಎಐಐಎಂಎಸ್‌ಗೆ ಕೇರಳ ಸರಕಾರ ಕೋಝಿಕೋಡ್‌ನಲ್ಲಿ 200 ಎಕರೆ ಜಮೀನು ಕಾದಿರಿಸಿದೆ.
*ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಲ್ಲಿ ಬಾಕಿಯಾಗಿರುವ 636 ಕೋಟಿ ರೂ. ಮೊತ್ತವನ್ನು ಶೀಘ್ರ ಕೇರಳಕ್ಕೆ ಪಾವತಿಸುವುದು.
*2577 ಕೋಟಿ ರೂ. ಅಂದಾಜು ವೆಚ್ಚದ ಕೊಚ್ಚಿ ಮೆಟ್ರೋ ದ್ವಿತೀಯ ಹಂತದ ವಿಸ್ತರಣೆ ಯೋಜನೆಯ ಪ್ರಸ್ತಾವನೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಬಾಕಿ ಇದೆ. ಇದಕ್ಕೆ ಶೀಘ್ರ ಅನುಮೋದನೆ ನೀಡುವುದು.
*ರಬ್ಬರ್ ಉತ್ಪಾದಕರಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಧನವನ್ನು ಕಿ.ಗ್ರಾಂ.ಗೆ 150 ರೂ.ನಿಂದ 200 ರೂ.ಗೆ ಹೆಚ್ಚಿಸುವ ಯೋಜನೆಯಿದ್ದು ಇದಕ್ಕೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡಬೇಕು.
*ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಪೂರ್ಣಗೊಳ್ಳಲು ಕೇಂದ್ರ ಸರಕಾರ ಒಂದಾವರ್ತಿಯಲ್ಲಿ 500 ಕೋಟಿ ರೂ. ಆರ್ಥಿಕ ನೆರವು ನೀಡಬೇಕು.
*ಎಚ್‌ಎಲ್‌ಎಲ್ ಲಿ. ಸಂಸ್ಥೆ ಸೇರಿದಂತೆ ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಯೋಜನೆಯನ್ನು ಕೈಬಿಡಬೇಕು. 100 ಎಕರೆ ವಿಸ್ತೀರ್ಣವಿರುವ ಕೊಚ್ಚಿ ವಿಶೇಷ ಆರ್ಥಿಕ ವಲಯಕ್ಕೆ ಇನ್ನೂ 200 ಎಕರೆ ಸೇರಿಸಿ ವಿಸ್ತರಿಸುವ ಯೋಜನೆಗೆ ನೆರವು ನೀಡಬೇಕು.
* ಕೊಚ್ಚಿಯಲ್ಲಿರುವ ‘ಎಫ್‌ಎಸಿಟಿ’ಯಲ್ಲಿ ಅನಿಲ ಆಧಾರಿತ ಯೂರಿಯ ಸ್ಥಾವರ ನಿರ್ಮಿಸಲು ಕೇಂದ್ರ ರಸಗೊಬ್ಬರ ಇಲಾಖೆ 200 ಎಕರೆ ಜಮೀನು ನೀಡಲು ಸಮ್ಮತಿಸಿದೆ. 1200 ಕೋಟಿ ರೂ. ವೆಚ್ಚದ ಈ ಯೋಜನೆಗೆ ರಾಜ್ಯ ಸರಕಾರಕ್ಕೆ ಆರ್ಥಿಕ ನೆರವು ನೀಡಬೇಕು- ಇತ್ಯಾದಿ ಪ್ರಮುಖ ಬೇಡಿಕೆಯುಳ್ಳ ಮನವಿಯನ್ನು ಪ್ರಧಾನಿಗೆ ಅರ್ಪಿಸಲಾಗಿದೆ.
ಈ ಮಧ್ಯೆ ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ರಮೇಶ್ ಚೆನ್ನಿತ್ತಿಲ ಅವರೂ ಪ್ರಧಾನಿಗೆ ಮನವಿ ಸಲ್ಲಿಸಿದ್ದು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಿಸಿದ ಪ್ರದೇಶಗಳಿಗೆ ಶೀಘ್ರ ಅನುಮತಿ ನೀಡುವಂತೆ ಒತ್ತಾಯಿಸಿದ್ದಾರೆ.







