ಕಲ್ಲಡ್ಕ ಗಲಭೆಗೆ ಸರ್ಕಾರದ ನೇರ ಕೈವಾಡ: ಸಂಸದ ನಳಿನ್ ಕುಮಾರ್ ಆರೋಪ

ಪುತ್ತೂರು, ಜೂ. 17: ಕಾಂಗ್ರೆಸ್ ಆಡಳಿತದಿಂದಾಗಿ ಕಾನೂನು ವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಹಿಂದೂ ಶಕ್ತಿಯನ್ನು ಮತ್ತು ಹಿಂದೂ ಭಾವನೆಗಳನ್ನು ಧಮನಿಸುವ ಕಾರ್ಯಕ್ರಮ ಮತೀಯ ಮಾಫಿಯಾ ಮತ್ತು ಪೊಲೀಸ್ ಇಲಾಖೆಯಿಂದ ನಡೆಯುತ್ತಿದೆ. ದುಷ್ಕೃತ್ಯಗಳನ್ನು ನಡೆಸುವ ಹಿಂದೆ ಸರ್ಕಾರದ ನೇರ ಕೈವಾಡವಿದೆ ಎಂದು ಸಂಸದ ನಳಿನ್‌ಕುಮಾರ್ ಆರೋಪಿಸಿದರು.
ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಪೊಲೀಸ್ ಇಲಾಖೆ ಆಡಳಿತ ನಡೆಸುವ ರಾಜಕಾರಣಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಪೊಲೀಸರ ಕೈ ಕಟ್ಟಿಹಾಕಿರುವುದರಿಂದ ದಕ್ಷತೆಯ ಅಧಿಕಾರಿಗಳಿದ್ದರೂ ಪೊಲೀಸರು ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಹಿಂದೂ ಭಾವನೆಗಳ ಮೇಲೆ ಡಂಡಯಾತ್ರೆ ನಡೆಸುವ ರೀತಿಯ ಕೆಲಸಗಳು ನಿರಂತರವಾಗಿ ನಡೆಯುತ್ತಿದ್ದರೂ, ದುಷ್ಕೃತ್ಯಗಳನ್ನು ನಡೆಸುವ ಆರೋಪಿಗಳನ್ನು ಬಂಧಿಸುವ ಬದಲು ತಲೆ ಸಂಖ್ಯೆಯ ಲೆಕ್ಕಕ್ಕೋಸ್ಕರ ಅಮಾಯಕ ಹಿಂದೂ ಯುವಕರನ್ನು ಬಂಧಿಸುವ ಮತ್ತು ಗೂಂಡಾಗಿರಿ ಕಾಯ್ದೆ ಹೇರುವ ಮೂಲಕ ಭಯದ ವಾತಾವರಣ ಸೃಷ್ಠಿಸಲಾಗಿದೆ ಎಂದರು.
ಹಿಂದೂ ಜಾಗರಣಾ ವೇದಿಕೆ ವತಿಯಿಂದ ಜೂ. 24ರಂದು ಕಲ್ಲಡ್ಕದಲ್ಲಿ ನಡೆಯುವ ಪ್ರತಿಭಟನೆಗೆ ಬಿಜೆಪಿ ಪೂರ್ಣ ಬೆಂಬಲ ನೀಡಿ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಿದೆ. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು.





