ಭೋಪಾಲ್: ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣು

ಭೋಪಾಲ್, ಜೂ. 17: ಧಾರ್ ಜಿಲ್ಲೆಯ ರಾಮ್‌ಪುರ ಗ್ರಾಮದಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರೊಂದಿಗೆ ಮಧ್ಯಪ್ರದೇಶದಲ್ಲಿ ಈ ತಿಂಗಳಲ್ಲಿ ಕೃಷಿಗೆ ಸಂಬಂಧಿಸಿ ಆತ್ಮಹತ್ಯೆಗೆ ಶರಣಾದವರ ಸಂಖ್ಯೆ 12ಕ್ಕೆ ತಲುಪಿದೆ.
ಆತ್ಮಹತ್ಯೆ ಮಾಡಿಕೊಂಡ ರೈತನನ್ನು 40ರ ಹರೆಯದ ಜಗದೀಶ್ ಮೋರಿ ಎಂದು ಗುರುತಿಸಲಾಗಿದೆ. ತನ್ನ ತಂದೆಯ ಜಮೀನಿನ ದಾಖಲೆ ಇರಿಸಿ ಪಡೆದ ಸಾಲ ಮರು ಪಾವತಿಸಲು ಸಾಧ್ಯವಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಧಾರ್‌ನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾಲ ಮರುಪಾವತಿಸುವ ಒತ್ತಡದಲ್ಲಿ ಅವರಿದ್ದರು ಎಂದು ಜಗದೀಶ್ ಅವರ ಸಂಬಂಧಿಕರು ತಿಳಿಸಿದ್ದಾರೆ. ಅದಾಗ್ಯೂ, ಸಾಲ ಮರು ಪಾವತಿಸುವ ಒತ್ತಡದಿಂದ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಪೊಲೀಸರು ನಿರಾಕರಿಸಿದ್ದಾರೆ.
Next Story





