ಕೃಷಿ ವಿವಿ ಪ್ರಾಧ್ಯಾಪಕರು ಪಾಠ ಮಾಡುವುದರ ಜೊತೆಗೆ ಗದ್ದೆಗಳಲ್ಲಿಯೂ ಕೆಲಸ ಮಾಡಬೇಕು: ಸಚಿವ ಕಾಗೋಡು ತಿಮ್ಮಪ್ಪ

ಶಿವಮೊಗ್ಗ, ಜೂ. 17: ಕೃಷಿ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕರು ಪಾಠ ಮಾಡುವುದರ ಜೊತೆಗೆ ಕೃಷಿ ಚಟುವಟಿಕೆಗಳ ಬಗ್ಗೆಯೂ ಮಾಹಿತಿ ಹೊಂದಿರಬೇಕು. ಕೃಷಿ ಜಮೀನುಗಳಿಗೆ ತೆರಳಿ ಬೆಳೆಗಳ ಪ್ರಯೋಗ ನಡೆಸಬೇಕು ಎಂದು ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಜಿಲ್ಲೆಯ ಸಾಗರ ತಾಲೂಕಿನ ಇರುವಕ್ಕಿ ಗ್ರಾಮದಲ್ಲಿ 777.7 ಎಕರೆ ಪ್ರದೇಶದಲ್ಲಿ ಕೃಷಿ ತೋಟಗಾರಿಕಾ ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ಶನಿವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಣ್ಣು ಹೇಗಿರಬೇಕು, ಎಷ್ಟು ಆಳ ಉಳುಮೆ ಮಾಡಬೇಕು, ಬೀಜ ಬಿತ್ತುವುದು ಹೇಗೆಂಬುವುದನ್ನು ತಿಳಿದುಕೊಂಡು ರೈತರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ ಅವರು, ಕೃಷಿ ವಿವಿ ಪ್ರಾಧ್ಯಾಪಕರು ಒಳ್ಳೆ ಪಾಠ ಮಾಡುತ್ತಾರೆ. ಆದರೆ ಗದ್ದೆ ನಾಟಿ ಮಾಡುವುದಾಗಲಿ ಅಥವಾ ನೇಗಿಲು ಹಿಡಿಯುವುದಾಗಲಿ ಗೊತ್ತಿರುವುದಿಲ್ಲ ಎಂದು ಹೇಳಿದರು.
ಕಾಲಮಿತಿಯಲ್ಲಿ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕು. ಇಡೀ ರಾಜ್ಯ, ದೇಶಕ್ಕೆ ಈ ವಿವಿ ಮಾದರಿಯಾಗಿ ನಿಲ್ಲಬೇಕು. 8 ತಿಂಗಳ ನಂತರ ಮುಖ್ಯಮಂತ್ರಿಗಳಿಂದಲೇ ಕಟ್ಟಡ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಕೃಷಿ ತೋಟಗಾರಿಕೆ ವಿವಿ ಕ್ಯಾಂಪಸ್ ನಿರ್ಮಾಣಕ್ಕೆ 250 ಕೋಟಿ ರೂ. ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಪ್ರಸ್ತುತ ಮೊದಲ ಹಂತದಲ್ಲಿ ವಿವಿಗೆ ತುರ್ತು ಅಗತ್ಯವಿ ರುವ ಕಟ್ಟಡ ನಿರ್ಮಾಣಕ್ಕೆ ಸರ್ಕಾರವು 150 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಮಾಹಿತಿ ನೀಡಿದರು. 2 ನೇ ಹಂತದಲ್ಲಿ ವಿವಿಯ ಕಟ್ಟಡ ಹಾಗೂ ಮೂಲಸೌಕರ್ಯ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇದಕ್ಕೆ ಅಗತ್ಯವಾದ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಲಿದೆ. ಪ್ರಥಮ ಹಂತದಲ್ಲಿ ಅಗತ್ಯ ಮೂಲಸೌಕರ್ಯವನ್ನೊಳಗೊಂಡ ಕ್ಯಾಂಪಸ್ ಕೆಲವೇ ತಿಂಗಳುಗಳಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ನಾಲ್ಕು ವರ್ಷಗಳ ಸಾಧನೆಯ ಕಿರುಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಬಿಡುಗಡೆ ಮಾಡಿದರು.
ಕೃಷಿ ವಿವಿ ಕುಲಪತಿ ಡಾ. ವಾಸುದೇವಪ್ಪ, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಸಾಗರ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ, ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಉಮೇಶ್ ಸೇರಿದಂತೆ ಮೊದಲಾದವರಿದ್ದರು.







