ಸಚಿವ ರಮಾನಾಥ ರೈ ರಾಜೀನಾಮೆಗೆ ಎಸ್‌ಡಿಪಿಐ ಆಗ್ರಹ
ಬೆಂಗಳೂರು, ಜೂ. 17: ಕರಾವಳಿ ಭಾಗದಲ್ಲಿ ಶಾಂತಿ-ಕಾನೂನು ಸುವ್ಯವಸ್ಥೆಯನ್ನು ಉಳಿಸಲು ಅಸಮರ್ಥರಾದ ಉಸ್ತುವಾರಿ ಸಚಿವ ರಮನಾಥ್ ರೈ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕೆಂದು ಎಸ್‌ಡಿಪಿಐ ಆಗ್ರಹಿಸಿದೆ. ಚುನಾವಣೆ ಹತ್ತಿರ ಬರುವಾಗ ಸಂಘಪರಿವಾರವು ಕೋಮು ಗಲಭೆ, ಕೋಮು ದ್ವೇಷವನ್ನು ಹರಡಿಸುವ ಸಂಚನ್ನು ರೂಪಿಸುತ್ತಿದೆ. ಇತ್ತೀಚೆಗೆ ಕಲ್ಲಡ್ಕ ಹಾಗೂ ಕರಾವಳಿ ಭಾಗಗಳಲ್ಲಿ ಸಂಘಪರಿವಾರ ರೂಪಿಸಿದ ಕೋಮುಗಲಭೆ ಉತ್ತಮ ನಿದರ್ಶನ ಎಂದು ಅದು ಅಭಿಪ್ರಾಯಿಸಿದೆ.
ಪೊಲೀಸರ ಮುಸ್ಲಿಂ ವಿರೋಧಿ ನೀತಿ ಶಾಶ್ವತವಾಗಿ ನಿಲ್ಲಬೇಕು. ಇಲ್ಲದಿದ್ದರೆ ಜಾತ್ಯತೀತ ಶಕ್ತಿಗಳೆಲ್ಲ ಒಂದಾಗಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿರುವ ಎಸ್‌ಡಿಪಿಐ, ಕರಾವಳಿ ಭಾಗದಲ್ಲಿ ಶಾಂತಿ-ಕಾನೂನು ಸುವ್ಯವಸ್ಥೆಯನ್ನು ಉಳಿಸಲು ಅಸಮರ್ಥರಾದ ಉಸ್ತುವಾರಿ ಸಚಿವ ರಮನಾಥ್ ರೈ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿದೆ. ಭೂಮಿ ಮತ್ತು ವಸತಿ ವಂಚಿತ ಹಕ್ಕು ಹೋರಾಟಗಾರರು ಮೂರು ದಿನಗಳಿಂದ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಧರಣಿ ನಡೆಸುತ್ತಿದ್ದರೂ ಸರಕಾರ ಸ್ಪಂದಿಸದಿರುವುದನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿಯ ಕಾರ್ಯಕಾರಣಿ ಸಭೆ ತೀವ್ರವಾಗಿ ಖಂಡಿಸಿದೆ.
ಭೂಮಿ ಮತ್ತು ಮನೆ ನಿವೇಶನಕ್ಕಾಗಿ ಮೂರು ದಿನಗಳಿಂದ ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೇ ಹೋರಾಟ ನಡೆಸುತ್ತಿದ್ದರೂ ಸರಕಾರ ಕನಿಷ್ಠ ಮಾನವೀಯತೆಯನ್ನು ತೋರಿಲ್ಲ. ಭೂ ಮಾಫಿಯಾಗಳ ಪರವಾಗಿರುವ ಸರಕಾರ ಬಡವರನ್ನು ನಿರ್ಲಕ್ಷಿಸುತ್ತಿದೆ ಎಂದು ಎಸ್‌ಡಿಪಿಐ ಆರೋಪಿಸಿದೆ.
ಬಡ ರೋಗಿಗಳನ್ನು ಲೂಟಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ಮತ್ತು ವೈದ್ಯರ ನಿಯಂತ್ರಣ ಸಂಬಂಧ ಸದನದಲ್ಲಿ ಚರ್ಚಿಸಿದ ಮಸೂದೆಯನ್ನು ಸ್ವಾಗತಿಸಿರುವ ಪಕ್ಷ, ಖಾಸಗಿ ಆಸ್ಪತ್ರೆ, ವೈದ್ಯರು, ಬಡರೋಗಿಗಳಿಗೆ ಕಡಿಮೆ ಹಾಗೂ ಉತ್ತಮವಾದ ಆರೋಗ್ಯ ನೀಡಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಶನ್ ಹಾವಳಿಗಳನ್ನು ತಡೆಗಟ್ಟುವಲ್ಲಿ ಸರಕಾರ ವಿಫಲವಾಗಿದೆ. ನ್ಯಾಯಾಲಯದ ಆದೇಶ ಮತ್ತು ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಖಾಸಗಿ ಸಂಸ್ಥೆಗಳು ಬಡ, ಮಧ್ಯಮ ವರ್ಗದ ವಿದ್ಯಾರ್ಥಿಗಳ ಸಂವಿಧಾನಿಕ ಶೈಕ್ಷಣಿಕ ಹಕ್ಕನ್ನು ಕಸಿದುಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಎಸ್‌ಡಿಪಿಐ ಕಾರ್ಯಕಾರಣಿ ಸಭೆ ಆಗ್ರಹಿಸಿದೆ ಎಂದು ಪಕ್ಷದ ಅಧ್ಯಕ್ಷ ಅಬ್ದುಲ್ ಹನ್ನಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.