ಎಸ್.ಡಿ.ಎಂ.ಐ.ಎಂ.ಡಿ.ಗೆ ಅಂತಾರಾಷ್ಟ್ರೀಯ ಮಾನ್ಯತೆ
ಬೆಳ್ತಂಗಡಿ, ಜೂ. 17: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಶನಲ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಮೈಸೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವೆಲಪ್‌ಮೆಂಟ್ (ಎಸ್.ಡಿ.ಎಂ.ಐ.ಎಂ.ಡಿ.) ನೀಡುತ್ತಿರುವ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್ (ಪಿಜಿಡಿಎಂ) ಶಿಕ್ಷಣಕ್ಕೆ ಅಮೇರಿಕಾದ ಅಕ್ರೆಡಿಟೇಶನ್ ಕೌನ್ಸಿಲ್ ಫಾರ್ ಬಿಸಿನೆಸ್ ಸ್ಕೂಲ್ಸ್ ಆ್ಯಂಡ್ ಪ್ರೋಗ್ರಾಮ್ಸ್ (ಎ.ಸಿ.ಬಿ.ಎಸ್.ಪಿ.) ಅಂತಾರಾಷ್ಟ್ರೀಯ ಮಾನ್ಯತೆ ನೀಡಿದೆ.
ಮಾನ್ಯತೆಯ ಪ್ರಶಸ್ತಿ ಪ್ರದಾನ ಸಮಾರಂಭವು ಜೂ.26ರಂದು ಅಮೇರಿಕಾದ ಲಾಸ್ ಏಂಜಲೀಸ್ ಬಳಿಯ ಅನಹೆಮ್‌ನಲ್ಲಿ ನಡೆಯಲಿದ್ದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಸಮಾರಂಭದಲ್ಲಿ ಭಾಗವಹಿಸುವರು.
ಈ ಸಂಸ್ಥೆಯು ಜಾಗತಿಕ ಮನ್ನಣೆಗೆ ಪಾತ್ರವಾದ ಬಿ. ಸ್ಕೂಲ್ ಆಗಿದ್ದು, ವಿಶ್ವದ ಬಿ. ಸ್ಕೂಲ್‌ಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ವಿನಿಮಯ ಕಾರ್ಯಕ್ರಮಗಳು, ಸಂಶೋಧನಾ ಕಾರ್ಯಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಭಾಗಿತ್ವಕ್ಕೆ ಸಂಸ್ಥೆಗೆ ಅವಕಾಶ ದೊರಕಲಿದೆ. ವಿದ್ಯಾರ್ಥಿಗಳು ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುತ್ತಾರೆ. ಸಂಸ್ಥೆಯ ಪ್ರಾಧ್ಯಾಪಕರು ಕೂಡಾ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಹೊಂದಿದ ಇತರ ಸಂಸ್ಥೆಗಳ ಅಧ್ಯಾಪಕರೊಂದಿಗೆ ವಿಚಾರ ವಿನಿಮಯ ನಡೆಸಲು ಮುಕ್ತ ಅವಕಾಶವಿದೆ. ಸಂಸ್ಥೆಯಲ್ಲಿ ನಾಯಕತ್ವ ಗುಣ, ಯೋಜನಾಬದ್ಧ ಬೋಧನಾ ವಿಧಾನ, ಪ್ರಾಧ್ಯಾಪಕರ ಶೈಕ್ಷಣಿಕ ಸಾಧನೆ, ವಿದ್ಯಾರ್ಥಿಗಳೊಂದಿಗೆ ಸೌಹಾರ್ದಯುತ ಸಂಬಂಧ, ಮಾನವೀಯ ಮೌಲ್ಯಗಳು ಇತ್ಯಾದಿಗಳ ಪರಿಶೀಲನೆ ನಡೆಸಿ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಂಸ್ಥೆಗೆ ಇ ಪಾಸ್ ಮಾನ್ಯತೆ: ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್ಮೆಂಟ್ ಡೆವೆಲಪ್‌ಮೆಂಟ್ (ಇಈಒಆ) ವಾರ್ಷಿಕ ಸಮ್ಮೇಳನದಲ್ಲಿ ಎಸ್.ಡಿ.ಎಂ.ಐ.ಎಂ.ಡಿ.ಯ ಪಿ.ಜಿ.ಡಿ.ಎಂ. ಶಿಕ್ಷಣಕ್ಕೆ ಇ-ಪಾಸ್ (Education Policy and Accreditation Standard)ಮಾನ್ಯತೆ ನೀಡಲಾಯಿತು.
ಜೂನ್ 8 ರಂದು ನಡೆದ ಸಮಾರಂಭದಲ್ಲಿ ಸಂಸ್ಥೆಯ ಆಡಳಿ ಮಂಡಳಿಯ ಉಪಾಧ್ಯಾಕ್ಷರಾದ ಡಿ. ಸುರೇಂದ್ರ ಕುಮಾರ್ ಮತ್ತು ಸಂಸ್ಥೆಯ ನಿರ್ದೇಶಕರಾದ ಡಾ. ಎನ್. ಆರ್. ಪರಶುರಾಮನ್ ಅವರು ಬರ್ಲಿನ್‌ನಲ್ಲಿ ಮಾನ್ಯತಾ ಪತ್ರವನ್ನು ಸ್ವೀಕರಿಸಿದರು.
2016ರ ಜುಲೈನಲ್ಲಿ ಸಂಸ್ಥೆಯ ವತಿಯಿಂದ ಸ್ವಯಂ ಅಧ್ಯಯನ ವರದಿ ಸಲ್ಲಿಸಿದ ಬಳಿಕ ಅಕ್ಟೋಬರ್‌ನಲ್ಲಿ ಯುರೋಪಿಯನ್ ಫೌಂಡೇಶನ್ ಫಾರ್ ಮ್ಯಾನೇಜ್‌ಮೆಂಟ್ ಡೆವೆಲಪ್‌ಮೆಂಟ್‌ನ (ಇಈಒಆ) ಶಿಕ್ಷಣ ತಜ್ಞರ ಸಮಿತಿಯು ಮೈಸೂರಿನಲ್ಲಿರುವ ಸಂಸ್ಥೆಗೆ ಭೇಟಿ ನೀಡಿತು. ಮಾನದಂಡಗಳಿಗೆ ಪೂರಕವಾದ ದಾಖಲೆಗಳು, ಸಂಸ್ಥೆಯ ಚಟುವಟಿಕೆಗಳ ವರದಿಗಳು ಮತ್ತು ಮೂಲಭೂತ ಸೌಕರ್ಯಗಳನ್ನು ಸಮಿತಿಯವರು ಪರಿಶೀಲನೆ ನಡೆಸಿ ಅಂತಾರಾಷ್ಟ್ರೀಯ ಇ ಪಾಸ್ ಮಾನ್ಯತೆಗೆ ಅರ್ಹವೆಂದು ಅಂಗೀಕರಿಸಲಾಯಿತು.







