ಇಂಡೊನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್: ಅಗ್ರ ಶ್ರೇಯಾಂಕಿತನನ್ನು ಮಣಿಸಿದ ಶ್ರೀಕಾಂತ್ ಫೈನಲ್‌ಗೆ

ಜಕಾರ್ತ, ಜೂ.17: ಇಲ್ಲಿ ನಡೆಯುತ್ತಿರುವ ಇಂಡೊನೇಷ್ಯಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಪ್ರೀಮಿಯರ್ ಟೂರ್ನಿಯ ಪುರುಷರ ಸಿಂಗಲ್‌ನಲ್ಲಿ ಭಾರತದ ಕಿಡಂಬಿ ಶ್ರೀಕಾಂತ್ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಸೆಮಿಫೈನಲ್‌ನಲ್ಲಿ ಅವರು ದಕ್ಷಿಣ ಕೊರಿಯಾದ ಸನ್ ವಾನ್ -ಹೊ ವಿರುದ್ಧ 21-15, 18-21,24-22 ಅಂತರದಲ್ಲಿ ಜಯಿಸಿ ಫೈನಲ್ ತಲುಪಿದ್ದಾರೆ.
ಗುಂಟೂರಿನ 24ರ ಹರೆಯದ ಆಟಗಾರ ಶ್ರೀಕಾಂತ್ 1 ಗಂಟೆ ಮತ್ತು 12 ನಿಮಿಷಗಳಲ್ಲಿ ಗೆಲುವಿನ ದಡ ಸೇರಿದರು. ಶ್ರೀಕಾಂತ್ ಈ ಹಿಂದೆ ಸನ್ ವಾನ್‌ಗೆ 4 ಬಾರಿ ಶರಣಾಗಿದ್ದರು. ಎರಡು ಬಾರಿ ಜಯ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ನಂ.22 ಶ್ರೀಕಾಂತ್ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟರು.
ಶ್ರೀಕಾಂತ್ ನಾಲ್ಕನೆ ಸೂಪರ್ ಸರಣಿ ಫೈನಲ್ ತಲುಪಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಸಿಂಗಾಪುರ , 2014ರಲ್ಲಿ ಚೀನಾ ಓಪನ್ ಮತ್ತು 2015ರಲ್ಲಿ ಇಂಡಿಯನ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಫೈನಲ್ ಪಂದ್ಯ ರವಿವಾರ ನಡೆಯಲಿದೆ. ಪ್ರಶಸ್ತಿಯ ಸುತ್ತಿನಲ್ಲಿ ಶ್ರೀಕಾಂತ್ ಅವರು ಜಪಾನ್‌ನ ಕಝುಮಸಾ ಸಕಾಯ್ ಅವರನ್ನು ಎದುರಿಸಲಿದ್ದಾರೆ. ಸಕಾಯ್ ಅವರು ಪ್ರಣಯ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದಾರೆ.
ಪ್ರಣಯ್‌ಗೆ ಸೋಲು: ಇನ್ನೊಂದು ಸೆಮಿಫೈನಲ್‌ನಲ್ಲಿ ಭಾರತದ ಎಚ್.ಎಸ್.ಪ್ರಣಯ್ ಅವರು ಸೋತು ನಿರ್ಗಮಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಜಪಾನ್‌ನ ಕಝುಮಸಾ ಸಕಾಯ್ ವಿರುದ್ಧ ಪ್ರಣಯ್ 21-17, 26-28, 18-21 ಅಂತರದಲ್ಲಿ ಸೋಲು ಅನುಭವಿಸಿ ಹ್ಯಾಟ್ರಿಕ್ ಗೆಲುವು ದಾಖಲಿಸುವಲ್ಲಿ ಮುಗ್ಗರಿಸಿದರು.
ವಿಶ್ವದ 25ನೆ ಶ್ರೇಯಾಂಕದ ಪ್ರಣಯ್ ಅವರು ವಿಶ್ವದ ನಂ.47 ಶ್ರೇಯಾಂಕದ ಸಕಾಯ್ ಸವಾಲನ್ನು ಎದುರಿಸುವಲ್ಲಿ ವಿಫಲರಾದರು. ಮಲೇಷ್ಯಾದ ಲೀ ಚಾಂಗ್ ವೇ ಮತ್ತು ಚೀನಾದ ಚೆನ್ ಲಾಂಗ್ ಅವರನ್ನು ಸೋಲಿಸಿದ ಪ್ರಣಯ್ ಫೈನಲ್ ತಲುಪುವಲ್ಲಿ ಎಡವಿದರು.







