ಸಾಮರಸ್ಯವೇ ಬದುಕಾಗಬೇಕು: ಸಚಿವ ರೈ

ಬಂಟ್ವಾಳ, ಜೂ. 17: ಸಾಮರಸ್ಯವೇ ನಮ್ಮ ಬದುಕಾಗಬೇಕು ಮತ್ತು ಉಸಿರಾಗಬೇಕು. ಆಗ ಮಾತ್ರ ಎಲ್ಲ ಜಾತಿ, ಧರ್ಮದವರನ್ನೊಳಗೊಂಡ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪವಿತ್ರ ರಂಝಾನ್ ತಿಂಗಳ ಪ್ರಯುಕ್ತ ಸಚಿವರ ನೇತೃತ್ವದಲ್ಲಿ ಶನಿವಾರ ಬಿ.ಸಿ.ರೋಡ್ ತಲಪಾಡಿ ಅಲ್ ಖಝಾನಾ ಕಮ್ಯುನಿಟಿ ಹಾಲ್‌ನಲ್ಲಿ ಆಯೋಜಿ ಸಲಾದ ಇಫ್ತಾರ್ ಸೌಹಾರ್ದ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತೀ ವರ್ಷದ ರಮಝಾನ್ ತಿಂಗಳಲ್ಲಿ ನಾನು ಇಫ್ತಾರ್ ಕೂಟವನ್ನು ನಡೆಸಿಕೊಂಡು ಬರುತ್ತಿದ್ದೇನೆ. ನಾನು ಸಾಮಾಜಿಕ ಜೀವನಕ್ಕೆ ಬಂದ ನಂತರ ಎಲ್ಲ ಜಾತಿ, ಧರ್ಮದವರು ನನ್ನ ಸಹೋದರರು ಎಂಬಂತೆ ನೋಡುತ್ತಿದ್ದೇನೆ. ಮನುಷ್ಯ ಮನುಷ್ಯನನ್ನು ಪ್ರೀತಿ ಮಾಡಬೇಕು ಮತ್ತು ಮನುಷ್ಯ ಮನುಷ್ಯನಲ್ಲಿ ವಿಶ್ವಾಸ ಇರಿಸಬೇಕು. ಯಾರಲ್ಲೂ ಪರಸ್ಪರ ಅಪನಂಬಿಕೆ ಇರಬಾರದು. ಇಂದು ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಗಟ್ಟಿಯಾಗಬೇಕು. ಅದಕ್ಕೆ ನಾವೆಲ್ಲ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಸಮಾಜದಲ್ಲಿ ಕೆಲವೇ ಮಂದಿ ಕೆಟ್ಟವರಿದ್ದು ಅವರು ಸಮಾಜದ ಶಾಂತಿಯನ್ನು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವೆಲ್ಲ ಸಮಾಜದ ಶಾಂತಿ ಉಳಿಸುವ ಪ್ರಯತ್ನ ಮಾಡಿದಾಗ ಅಲ್ಲಾಹ ಪ್ರೀತಿ ನಮ್ಮ ಮೇಲೆ ಇರುತ್ತದೆ. ನಾವೆಲ್ಲ ಅಣ್ಣ ತಮ್ಮಂದಿರಂತೆ, ಅಕ್ಕ ತಂಗಿಯರಂತೆ ಬಾಳಬೇಕು. ಈ ಉದ್ದೇಶದಿಂದಲೇ ಎಲ್ಲ ಸಮುದಾಯದವರನ್ನು ಒಗ್ಗೂಡಿಸಿ ಪ್ರತೀ ವರ್ಷ ಇಫ್ತಾರ್ ಮಾಡುತ್ತಿದ್ದೇನೆ. ಕೆಟ್ಟವರ ವಿರುದ್ಧ ಗಟ್ಟಿ ಮನಸ್ಸಿಂದ ಹೋರಾಟ ಮಾಡುವವರಿಗೆ ಅಲ್ಲಾಹನ ಸಹಕಾರ ಯಾವಾಗಲೂ ಇರುತ್ತದೆ ಎಂದು ಹೇಳಿದ ಅವರು ಎಲ್ಲರ ಮನಸ್ಸಿಗೆ ಪ್ರೀತಿಯನ್ನು ಹಂಚುವ ಮನಸ್ಸನ್ನು ಅಲ್ಲಾಹನು ದಯಪಾಲಿಸಲಿ ಎಂಬುದೊಂದೇ ನನ್ನ ಪ್ರಾರ್ಥನೆಯಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್ ಪ್ರಸ್ತಾವಿಕವಾಗಿ ಮಾತನಾಡಿದರು. ಇರ್ಷಾದ್ ದಾರಿಮಿ ದುಅ ನೆರವೇರಿಸಿದರು. ವೇದಿಕೆಯಲ್ಲಿ ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಕಾಂಗ್ರೆಸ್ ಮುಖಂಡ ಹರೀಶ್ ಕುಮಾರ್, ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಬಂಗೇರ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಜಿಪಂ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ, ಶಾಹುಲ್ ಹಮೀದ್, ಪದ್ಮಶೇಖರ ಜೈನ್, ಜಿಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೆರೀಮಾರ್, ಸದಸ್ಯ ರಮ್ಲಾನ್, ಹಬೀಬ್ ದಾರಿಮಿ, ಬೇಬಿಕುಂದರ್, ಪದ್ಮನಾಭ ರೈ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ ಸ್ವಾಗತಿಸಿದರು. ಕೊಡಾಜೆ ಬಾಲಕೃಷ್ಣ ಆಳ್ವ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.







