ಅಪಘಾತ: ಗಾಯಾಳು ವಿದ್ಯಾರ್ಥಿನಿ ಮೃತ್ಯು

ಉಡುಪಿ, ಜೂ.17: ಕಿನ್ನಿಮುಲ್ಕಿ ಕಾವೇರಿ ಫೋರ್ಡ್ ಶೋರೂಂನ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜೂ.15ರಂದು ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅಂಬಲಪಾಡಿ ಕಪ್ಪೆಟ್ಟು ನಿವಾಸಿ ಅಶ್ಮಿತಾ ಸುವರ್ಣ(17) ಜೂ.17 ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜೂ.15ರಂದು ಸಂಜೆ ಕಾಲೇಜಿನಿಂದ ಬಸ್ಸಿನಲ್ಲಿ ಬಂದು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ಅಶ್ಮಿತಾಗೆ ಉಡುಪಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಸ್ವೀಫ್ಟ್ ಡಿಸೈರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಅಶ್ಮಿತಾ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕಪ್ಪೆಟ್ಟು ಗರಡಿ ರಸ್ತೆಯ ಅಶೋಕ್ ಅಂಚನ್ ಹಾಗೂ ಸುನೀತಾ ದಂಪತಿ ಪುತ್ರಿಯಾಗಿರುವ ಈಕೆ, ಉಡುಪಿಯ ಎಂಜಿಎಂ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು. ಈ ಬಾರಿಯ ಎಸೆಸೆಲ್ಸಿ ಪರೀಕ್ಷೆ ಯಲ್ಲಿ ಈಕೆ ಶೇ.96 ಅಂಕ ಪಡೆದು ಉಡುಪಿಯ ಸೈಂಟ್ ಸಿಸಿಲಿಸ್ ಪ್ರೌಢ ಶಾಲೆಗೆ ಪ್ರಥಮ ಎನಿಸಿಕೊಂಡಿದ್ದಳು.
ಅಪಘಾತಕ್ಕೀಡಾಗುವ ಹಿಂದಿನ ದಿನ ಅಶ್ಮಿತಾ ತರಗತಿಯಲ್ಲಿ ‘ನನ್ನ ಗುರಿ’ ಎಂಬ ವಿಷಯದ ಕುರಿತು ಬರೆದ ಪ್ರಬಂಧದಲ್ಲಿ ‘ನಾನು ವಕೀಲೆ ಆಗಬೇಕೆಂಬ ಗುರಿ ಹೊಂದಿದ್ದೇನೆ. ಆದರೆ ಪೋಷಕರ ಒತ್ತಾಯಕ್ಕೆ ವಿಜ್ಞಾನ ವಿಷಯವನ್ನು ಆರಿಸಿಕೊಂಡಿದ್ದೇನೆ’ ಎಂದು ತಿಳಿಸಿದ್ದಳು. ಮರಣದ ಬಳಿಕ ಅಂಗಾಗ ದಾನ ಮಾಡಬೇಕೆಂಬ ಇಚ್ಛೆಯನ್ನು ಆಕೆ ಹೊಂದಿದ್ದಳು. ಅದರಂತೆ ಆಕೆಯ ಪೋಷಕರು ಆಕೆಯ ಅಂಗಾಗ ದಾನ ಮಾಡಲು ಒಪ್ಪಿಗೆಗೆ ನೀಡಿದ್ದರು. ಆದರೆ ಅಪಘಾತದಿಂದ ಆಕೆಯ ಬಹುತೇಕ ಅಂಗಾಂಗಗಳು ವೈಫಲ್ಯ ಆಗಿರುವುದರಿಂದ ಕೇವಲ ಕಣ್ಣುಗಳನ್ನು ಮಾತ್ರ ದಾನ ಮಾಡಲು ಸಾಧ್ಯವಾಯಿತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.







