ಐವನ್ ಡಿ ಸೋಜಾ ನೇತೃತ್ವದಲ್ಲಿ ಇಫ್ತಾರ್ ಕೂಟ

ಮಂಗಳೂರು, ಜೂ. 17: ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅವರ ನೇತೃತ್ವದಲ್ಲಿ ಶನಿವಾರ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ಇಫ್ತಾರ್ ಕೂಟ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಐವನ್ ಡಿಸೋಜಾ, ರಮಝಾನ್ ಉಪವಾಸವೆಂದರೆ ತ್ಯಾಗಗಳು ಮತ್ತು ಪರರ ಕಷ್ಟಗಳನ್ನು ಅರಿಯುವ ತಿಂಗಳಾಗಿದೆ. ರಮಝಾನ್, ದೀಪಾವಳಿ, ಕ್ರಿಸ್ಮಸ್ ಸಹಿತ ವಿವಿಧ ಧರ್ಮೀಯರ ಹಬ್ಬಗಳನ್ನು ಎಲ್ಲರೂ ಸೇರಿ ಆಚರಿಸುವಂತಾಗಬೇಕು ಎಂದರು.
ಕದ್ರಿ ಶ್ರೀ ಮಂಜುನಾಥ ಕ್ಷೇತ್ರದ ತಂತ್ರಿ ಮಾತನಾಡಿ, ಸಮಾಜದಲ್ಲಿ ಸೌಹಾರ್ದದ ಕೊರತೆ ಕಾಣುತ್ತಿದೆ. ಸಮಾಜದಲ್ಲಿನ ಕೆಲವೊಂದು ಸಮಸ್ಯೆಗಳನ್ನು ಗುರುತಿಸಿ ಎಲ್ಲ ಧರ್ಮದ ಮುಖಂಡರು ಚರ್ಚಿಸಿ ಪರಿಹಾರ ಕಂಡುಕೊಂಡರೆ ಸೌಹಾರ್ದ ಏರ್ಪಡಲು ಸಾಧ್ಯವಿದೆ ಎಂದರು.
ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ, ಧರ್ಮ, ಜಾತಿಗಳ ನಡುವಿನ ಗೋಡೆಗಳನ್ನು ಕೆಡವಿ ಜನರ ನೋವುಗಳಿಗೆ ಸ್ಪಂದಿಸಿ ಹಾಗೂ ಹಸಿದವರ ಹಸಿವನ್ನು ನೀಗಿಸುವ ಕೆಲಸ ಮಾಡಬೇಕು. ಈ ಮೂಲಕ ದೇವನ ಸಂಪ್ರೀತಿಗೆ ಪಾತ್ರರಾಗಬೇಕೆಂದರು.
ಫಾದರ್ ಮಾಥ್ಯು ವಾಸ್ ಮಾತನಾಡಿ, ಎಲ್ಲ ಧರ್ಮಗಳಲ್ಲೂ ಉಪವಾಸಕ್ಕೆ ಮಹತ್ವ ನೀಡಲಾಗಿದೆ. ಅವರವರ ಧರ್ಮಗಳ ಆಚರಣೆಗೆ ಅವಕಾಶ ಕಲ್ಪಿಸುವ ಮೂಲಕ ಸೌಹಾರ್ದ ಸಮಾಜ ನಿರ್ಮಿಸೋಣ ಎಂದರು.
ಕಾರ್ಯಕ್ರಮದಲ್ಲಿ ಮೇಯರ್ ಕವಿತಾ ಸನಿಲ್, ಉಪ ಮೇಯರ್ ರಜನೀಶ್, ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸದಾನಂದ ಶೆಟ್ಟಿ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ರಶೀದ್ ಹಾಜಿ, ಎಂ.ಜಿ.ಹೆಗ್ಡೆ, ಕಾರ್ಪೊರೇಟರ್ ರತಿಕಲಾ, ಸದಾಶಿವ ಉಳ್ಳಾಲ, ಸೀತಾರಾಂ ಶೆಟ್ಟಿ, ಬಿ.ಇಬ್ರಾಹೀಂ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಐವನ್ ಡಿಸೋಜಾರ ಶಿಫಾರಸಿನ ಮೇರೆಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ರೋಗಿಗಳಿಗೆ 11,19,430 ರೂ.ಗಳ ಪರಿಹಾರ ಧನದ ಚೆಕ್‌ಗಳ ವಿತರಣೆ ನಡೆಯಿತು.