ಪನ್ಸಾರೆ ಕೊಲೆ ಪ್ರಕರಣ: ಸಮೀರ್ ಗಾಯಕ್ವಾಡ್‌ಗೆ ಜಾಮೀನು

ಕೊಲ್ಹಾಪುರ, ಜೂ.17: ಕಮ್ಯುನಿಸ್ಟ್ ಮುಖಂಡ ಕಾಮ್ರೇಡ್ ಗೋವಿಂದ ಪನ್ಸಾರೆ ಕೊಲೆ ಪ್ರಕರಣದ ಆರೋಪಿ ಸಮೀರ್ ಗಾಯಕ್ವಾಡ್‌ಗೆ ಸ್ಥಳೀಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿದೆ.
2015ರ ಫೆ.15ರಂದು ಗೋವಿಂದ ಪನ್ಸಾರೆ ಮತ್ತವರ ಪತ್ನಿ ಉಮಾ ಮೇಲೆ ಗುಂಡು ಹಾರಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಿಸದೆ ಕೆಲ ದಿನಗಳ ಬಳಿಕ ಪನ್ಸಾರೆ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಕೆಲವು ಸಂದೇಹಾಸ್ಪದ ದೂರವಾಣಿ ಕರೆಗಳ ಆಧಾರದಲ್ಲಿ 2015ರ ಸೆ.15ರಂದು ಪೊಲೀಸರು ಸಮೀರ್ ಗಾಯಕ್ವಾಡ್‌ನನ್ನು ಬಂಧಿಸಿದ್ದರು.
ಈ ಹಿಂದೆ ಎರಡು ಬಾರಿ ಗಾಯಕ್ವಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಆದರೆ ಇದೀಗ 25,000 ರೂ.ಮೊತ್ತದ ವೈಯಕ್ತಿಕ ಬಾಂಡ್ ನೀಡಿದರೆ ಗಾಯಕ್ವಾಡ್‌ಗೆ ಜಾಮೀನು ಮಂಜೂರು ಮಾಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೆ ನ್ಯಾಯಾಲಯದ ಅನುಮತಿ ಇಲ್ಲದೆ ರಾಜ್ಯ ಬಿಟ್ಟು ತೆರಳದಂತೆ ಮತ್ತು ಕೊಲ್ಲಾಪುರ ಜಿಲ್ಲೆ ಪ್ರವೇಶಿಸದಂತೆ ಸೂಚಿಸಿದೆ.
Next Story





