ಉದ್ಯೋಗಾವಕಾಶ ಹೆಚ್ಚಿಲ್ಲ:ಸಚಿವ ಬಂಡಾರು ಹೇಳಿಕೆಗೆ ಶಾ ಸಮರ್ಥನೆ

ಮುಂಬೈ, ಜೂ.17: ಆರ್ಥಿಕ ಅಭಿವೃದ್ಧಿಯಿಂದ ಉದ್ಯೋಗಾವಕಾಶ ಹೆಚ್ಚಿಲ್ಲ ಎಂಬ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರ ಹೇಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮರ್ಥಿಸಿಕೊಂಡಿದ್ದಾರೆ. ಪ್ರವಾಸೋದ್ಯಮ ಮತ್ತು ವಾಯುಯಾನ ಕ್ಷೇತ್ರದಲ್ಲಿ ಸೃಷ್ಟಿಯಾಗಿರುವ ಉದ್ಯೋಗಾವಕಾಶವನ್ನು ಹೊರತುಪಡಿಸಿ ಸಚಿವರು ಈ ಹೇಳಿಕೆ ನೀಡಿದ್ದಾರೆ ಎಂದು ಶಾ ಹೇಳಿದ್ದಾರೆ.
‘ಮೇಕ್ ಇನ್ ಇಂಡಿಯಾ’ ಮುಂತಾದ ವಿವಿಧ ಯೋಜನೆಗಳಿಂದ ಹೆಚ್ಚಿನ ಬಂಡವಾಳ ಹರಿದುಬರಲಿದೆ ಮತ್ತು ಉದ್ಯೋಗಾವಕಾಶ ಹೆಚ್ಚಲಿದೆ ಎಂದ ಶಾ, ಮುದ್ರಾ ಬ್ಯಾಂಕ್ ಉಪಕ್ರಮದಿಂದ ಸುಮಾರು 7 ಕೋಟಿ ಯುವಜನತೆ ವಿವಿಧ ರೀತಿಯ ಉದ್ಯೋಗ ಪಡೆಯುವಂತಾಗಿದೆ . 10,000 ರೂ.ನಿಂದ 10 ಲಕ್ಷ ರೂ.ವರೆಗೆ ಮುದ್ರಾಬ್ಯಾಂಕ್‌ನಿಂದ ಸಾಲ ನೀಡಲಾಗುತ್ತದೆ. ಹೀಗೆ ಸಾಲ ಪಡೆದವರು ಉದ್ಯೋಗ ಹುಡುಕುವ ಮಟ್ಟದಿಂದ ಉದ್ಯೋಗಾವಕಾಶ ಸೃಷ್ಠಿಸುವ ಮಟ್ಟಕ್ಕೆ ತಲುಪುತ್ತಾರೆ ಎಂದರು.
ಇಂದಿರಾಗಾಂಧಿ ಕಾಲದಲ್ಲಿ ನಡೆದ ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದ ಬಡಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಲಾಗಿತ್ತು. ಆ ನಿರೀಕ್ಷೆ ಸುಳ್ಳಾಯಿತು. ಆದರೆ ಬಿಜೆಪಿ ಸರಕಾರವು ಮುದ್ರಾ ಬ್ಯಾಂಕ್ ಯೋಜನೆಯ ಮೂಲಕ ಜನರಿಗೆ ಯಾವುದೇ ಗ್ಯಾರಂಟಿ ನೀಡದೆ ಸಾಲ ನೀಡುತ್ತಿದೆ ಎಂದು ಶಾ ಹೇಳಿದರು.
ಆರ್ಥಿಕ ಅಭಿವೃದ್ಧಿಯು ಹೆಚ್ಚಿನ ಉದ್ಯೋಗಾವಕಾಶ ಸೃಷ್ಠಿಸಿಲ್ಲ ಎಂದು ಮುಂಬೈಯಲ್ಲಿ ಮೇ 31ರಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಹೇಳಿಕೆ ನೀಡಿದ್ದರು. ಅಲ್ಲದೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎಷ್ಟು ಉದ್ಯೋಗಾವಕಾಶ ಸೃಷ್ಠಿಯಾಗಿದೆ ಎಂಬ ಅಂಕಿ ಅಂಶ ಸಂಗ್ರಹಿಸಲು ಕ್ರಿಯಾಪಡೆಯೊಂದನ್ನು ರಚಿಸಲಾಗುವುದು ಎಂದು ಸಚಿವರು ಹೇಳಿದ್ದರು.







