'ನಾಲ್ಕೂರು ಸದಾನಂದ ಪೂಜಾರಿ ಕೊಲೆ': ತನಿಖೆಗೆ ಮೃತರ ಪತ್ನಿ ಒತ್ತಾಯ
ವೇಣೂರು, ಜೂ. 17: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರಿನಲ್ಲಿ ಮೇ 25 ರಂದು ಅಸಹಜ ಸ್ಥಿತಿಯಲ್ಲಿ ಪತ್ತೆಯಾದ ಸದಾಂದ ಪೂಜಾರಿ ಅವರ ಮೃತದೇಹದ ಬಗ್ಗೆ ಮೃತರ ಪತ್ನಿ ನಳಿನಾಕ್ಷಿ ವೇಣೂರು ಪೋಲಿಸ್ ಠಾಣೆಗೆ ದೂರು ನೀಡಿ ಇದೊಂದು ವ್ಯವಸ್ಥಿತ ಕೊಲೆ ಆಗಿದ್ದು, ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಳ್ತಂಗಡಿ ತಾಲೂಕು ನಾಲ್ಕೂರು ಗ್ರಾಮದ ಪೆಂಪುರುಂಜ ಬಳ್ಳಿದಡ್ಡ ಮನೆಯ ಸಿದ್ದು ಪೂಜಾರಿ ಅವರ ಪುತ್ರ ಸದಾನಂದ ಪೂಜಾರಿ (33) ಅವರ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಮೇ 25ರಂದು ಅಳದಂಗಡಿಯ ಕಟ್ರ ಕಾಲುಸಂಕದ ಅಡಿಯಲ್ಲಿ ಪತ್ತೆಯಾಗಿತ್ತು. ಕಾಲುಸಂಕದಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆಂದು ವೇಣೂರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು.
ನಾಪತ್ತೆಯಾಗಿದ್ದ ಸದಾನಂದ ಪೂಜಾರಿಯವರು ಎರಡು ದಿನದ ಬಳಿಕ ಶವವಾಗಿ ಪತ್ತೆಯಾಗಿದ್ದರು. ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಆದರೆ ಇದೀಗ ಪ್ರಕರಣದಲ್ಲಿ ತೀವ್ರ ಶಂಕೆ ವ್ಯಕ್ತಪಡಿಸಿ ಮೃತರ ಪತ್ನಿ ನಳಿನಾಕ್ಷಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.





