ಉಡುಪಿಗೆ ಆಗಮಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಭವ್ಯ ಸ್ವಾಗತ

ಉಡುಪಿ, ಜೂ.18: ಉಡುಪಿ ಶ್ರೀಕೃಷ್ಣ ಮಠ ಹಾಗೂ ಕೊಲ್ಲೂರು ದೇವಳ ಭೇಟಿ ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸಕ್ಕಾಗಿ ಇಂದು ಬೆಳಗ್ಗೆ ಉಡುಪಿಗೆ ಮೊದಲ ಬಾರಿಗೆ ಆಗಮಿಸಿದ ಭಾರತದ ರಾಷ್ಟ್ರಪತಿ ಪ್ರಣವ್ ಮುಖರ್ಜಿಗೆ ಭವ್ಯ ಸ್ವಾಗತ ಕೋರಲಾಯಿತು.
ಬಿಗಿ ಪೊಲೀಸ್ ಭದ್ರತೆಯಲ್ಲಿ ಸಜ್ಜುಗೊಳಿಸಲಾದ ಆದಿಉಡುಪಿಯ ಮೂರು ಹೆಲಿಪ್ಯಾಡ್‌ನಲ್ಲಿ ಭಾರತೀಯ ವಾಯು ಸೇನೆಯ ಮೂರು ಹೆಲಿ ಕ್ಯಾಪ್ಟರ್‌ಗಳು ಬೆಳಗ್ಗೆ 11.10ರ ಸುಮಾರಿಗೆ ಬಂದಿಳಿದವು.
ಮೊದಲ ಮತ್ತು ಮೂರನೆ ಹೆಲಿ ಕ್ಯಾಪ್ಟರ್‌ನಲ್ಲಿ ಐದು ಎಡಿಸಿಗಳು, ಭದ್ರತಾ ಅಧಿಕಾರಿಗಳು, ರಾಷ್ಟ್ರಭವನದ ಸಿಬ್ಬಂದಿಗಳು ಮತ್ತು ರಾಷ್ಟ್ರಪತಿ ಅವರ ಮಾಧ್ಯಮದವರು ಬಂದರೆ, ಎರಡನೆ ಹೆಲಿಕ್ಯಾಪ್ಟರ್‌ನಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಆಗಮಿಸಿದರು.
ರಾಷ್ಟಪತಿ ಜೊತೆ ಅವರ ಹೆಲಿಕ್ಯಾಪ್ಟರ್‌ನಲ್ಲಿ ಸಚಿವ ಕೆ.ಜೆ.ಜಾರ್ಜ್, ಅಧಿಕಾರಿಗಳಾದ ಸುವರ ಘೋಷ್, ಮೇಜರ್ ಜನರಲ್ ಅನಿಲ್ ಕೋಸ್ಟ, ಅಶೋಕ್ ಕುಮಾರ್ ಮೆಹ್ತಾ, ಎನ್.ಕೆ.ಕಶಪ್ ಮೊದಲಾದವರು ಇದ್ದರು. ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸುತ್ತಿರುವ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೆಲಿಪ್ಯಾಡ್‌ನಲ್ಲಿ ಪುಷ್ಪಾಗುಚ್ಛ ನೀಡಿ ಸ್ವಾಗತಿಸಿದರು. ಇವರೊಂದಿಗೆ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ರಾಷ್ಟ್ರಪತಿಯನ್ನು ಹೂಗುಚ್ಛದೊಂದಿಗೆ ಸ್ವಾಗತ ಕೋರಿದರು.
ಬಳಿಕ ರಾಷ್ಟ್ರಪತಿ ಅಲ್ಲಿಂದ ಬಿಗಿ ಭದ್ರತೆಯೊಂದಿಗೆ ಉಡುಪಿ ಬನ್ನಂಜೆ ಯಲ್ಲಿರುವ ಪ್ರವಾಸಿ ಬಂಗಲೆಗೆ ತೆರಳಿದರು. ಈ ವೇಳೆ ಕಾರಿನಲ್ಲಿ ಹೋಗುತ್ತಿದ್ದ ರಾಷ್ಟ್ರಪತಿ ಹೆಲಿಪ್ಯಾಡ್ ಬಳಿಯ ಎಪಿಎಂಸಿ ಆವರಣದಲ್ಲಿ ನೆರೆದಿದ್ದ ಜನರಿಗೆ ಕೈಮುಗಿದು ನಮಸ್ಕರಿಸಿದರು.
ರಾಷ್ಟ್ರಪತಿ ಹೆಲಿಕ್ಯಾಪ್ಟರ್‌ನಿಂದ ಇಳಿದು ಕಾರಿನವರೆಗೆ ನಡೆಯಲು ಕೆಂಪು ನೆಲ ಹಾಸುಗಳನ್ನು ಹಾಕಲಾಗಿತ್ತು. ಹೆಲಿಕ್ಯಾಪ್ಟರ್ ಆಗಮನಕ್ಕೆ ಮುನ್ನ ಮಳೆಯ ಮುನ್ಸೂಚನೆ ಕಂಡು ಬಂದ ಹಿನ್ನೆಲೆಯಲ್ಲಿ ಕೊಡೆಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹೆಲಿಪ್ಯಾಡ್ ಬಳಿ ಇರುವ ಎಪಿಎಂಸಿ ರಸ್ತೆಯನ್ನು ರಾಷ್ಟ್ರಪತಿ ಆಗಮನಕ್ಕೆ ಕೆಲವೇ ನಿಮಿಷಗಳ ಮೊದಲು ವಾಹನ ಹಾಗೂ ಜನ ಸಂಚಾರ ವನ್ನು ನಿಷೇಧಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ಹೆಲಿಪ್ಯಾಡ್ ಸುತ್ತ ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಆದಿಉಡುಪಿಯಿಂದ ಬನ್ನಂಜೆ, ಉಡುಪಿ ಸಿಟಿಬಸ್ ನಿಲ್ದಾಣ, ಕಲ್ಸಂಕ ರಸ್ತೆಯ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಝಿರೋ ಟ್ರಾಫಿಕ್ ಮಾಡಲಾಗಿತ್ತು. ಇದರಿಂದ ಸುಮಾರು 45 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿ ಸಹಿತ ಉಡುಪಿ ನಗರದ ರಸ್ತೆಗಳಲ್ಲಿ ಸಂಚಾರ ವ್ಯತಯ ಉಂಟಾಗಿತ್ತು.
ಬೆಳಗ್ಗೆ 11.20ಕ್ಕೆ ಬನ್ನಂಜೆ ಪ್ರವಾಸಿ ಬಂಗಲೆಗೆ ತೆರಳಿದ ರಾಷ್ಟ್ರಪತಿ ವಿಶ್ರಾಂತಿ ಪಡೆದು 11.45ಕ್ಕೆ ಶ್ರೀಕೃಷ್ಣ ಮಠಕ್ಕೆ ತೆರಳಿದರು. ಈ ವೇಳೆ ಪ್ರವಾಸಿ ಬಂಗಲೆ ಬಳಿ ನೆರೆದಿದ್ದ ಜನರ ಮಧ್ಯೆ ರಾಷ್ಟ್ರಪತಿಯನ್ನು ನೋಡಿದ ವ್ಯಕ್ತಿಯೊಬ್ಬರು ಜೈ ಹಿಂದ್ ಎಂಬ ಘೋಷಣೆ ಕೂಗಿ ಸೆಲ್ಯೂಟ್ ಮಾಡಿದರು. ಇದನ್ನು ಕಂಡ ರಾಷ್ಟ್ರಪತಿ ಕಾರಿನಲ್ಲೇ ಕುಳಿತು ನಮಸ್ಕರಿಸಿದರು. ಪ್ರವಾಸಿ ಬಂಗಲೆಯಿಂದ ಕಲ್ಸಂಕವರೆಗಿನ ರಸ್ತೆಯ ಇಕ್ಕೇಲಗಳಲ್ಲಿ ರಾಷ್ಟ್ರಪತಿಯನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.