ಮುಖವೇಣಿ ಆಂಜಿನಪ್ಪ

ಆಂಜಿನಪ್ಪನವರ ಮುಖವೇಣಿ ವಾದನ ಒಂದು ವಿಶಿಷ್ಟ ಪ್ರಯೋಗ. ಮುಖವೇಣಿಯ ಜೊತೆಗೆ ಶೃತಿ ಮತ್ತು ಒತ್ತುಸ್ವರ ಸೇರಿ ಒಮ್ಮೆಲೆ ಮೂರು ವಾದನಗಳು ಅವರ ತುಟಿಗಳ ಮಧ್ಯೆ ಬಂಧಿಯಾಗುತ್ತವೆ. ಯಾವುದೇ ಪದವಾಗಿರಲಿ ಆರಂಭದಿಂದ ಅಂತ್ಯದವರೆಗೂ ಅವರ ಉಸಿರಿಗೆ ತಡೆ ಬೀಳುವುದಿಲ್ಲ. ಅವರ ಆಲಾಪನೆಯ ಏರಿಳಿತಗಳು ಅದ್ಭುತ! ಯಾವ ಕಾರಣಕ್ಕೂ ನಾದಸಿರಿ ಕ್ಷೀಣಗೊಳ್ಳುವುದಿಲ್ಲ.
"ಮುಖವೇಣಿ ಆಂಜಿನಪ್ಪ" ಎಂದೇ ಖ್ಯಾತಿಗಳಿಸಿರುವ ಈ ಕಲಾವಿದ ನುಡಿಸುವ ಮುಖವೇಣಿ ತಂತಿವಾದ್ಯದ ವೀಣೆಯಲ್ಲ ಅದು ಶಹನಾಯಿಯೂ ಅಲ್ಲ ಅಥವಾ ಕೊಳಲು ಕೂಡ ಅಲ್ಲ. ವಿಶೇಷವೆಂದರೆ ಈ ಅಪ್ಪಟ ದೇಸೀಯ ಕಲಾವಿದನ ಕೈಯಲ್ಲಿ ಇದು ವೀಣೆಯೂ ಹೌದು! ಶಹನಾಯಿ ಅಥವಾ ಕೊಳಲೂ ಹೌದು!. ಎಪ್ಪತ್ತೈದರ ವಯೋವೃದ್ಧ ಆಂಜಿನಪ್ಪ ಮುಖವೇಣಿ ಹಿಡಿದು ಕುಳಿತರೆ ಕೇಳುಗರಿಗೆ, ಈ ತ್ರಿವೇಣಿ ಸಂಗಮದ ಗಾನಗಂಗೆ ಮೈಮನ ಪುಳಕ ಗೊಳಿಸುತ್ತದೆ.
ಖ್ಯಾತ ಸಂಗೀತ ದಿಗ್ಗಜರ ಆಲಾಪನೆಯನ್ನು ಆಲಿಸುತ್ತಿರು ವಷ್ಟೇ ಆನಂದ, ತನ್ಮಯತೆ ಉಂಟಾಗುತ್ತದೆ. ಆಂಜಿನಪ್ಪನವರನ್ನು ಪರಿಚಯಿಸಿಕೊಂಡು ಒಂದು ಸಣ್ಣ ಕೋರಿಕೆಯನ್ನು ಮುಂದಿಟ್ಟರೂ ಸಾಕು, ಕೈಅಳತೆ ದೂರದಲ್ಲಿಯೇ ನಮ್ಮ ಮುಂದೆ ಕುಳಿತು ತಾನು ಕಲಿತಿರುವ ವಿದ್ಯೆಯನ್ನೆಲ್ಲಾ ನಾದವಾಗಿಸಿ ಮತ್ತಷ್ಟು ಆತ್ಮೀಯರಾಗಿ ಬಿಡುತ್ತಾರೆ. ಇಂಥ ಸಜ್ಜನಿಕೆಯಿಂದಾಗಿಯೇ ಈ ದೇಸೀ ಕಲಾವಿದನನ್ನು ಸಾಮಾನ್ಯರಿಂದ ಹಿಡಿದು ದೊಡ್ಡ ಅಧಿಕಾರಿಗಳು, ರಾಜಕಾರಣಿಗಳು ಸಹ ಬಲು ಅಕ್ಕರೆಯಿಂದ ಕಾಣುತ್ತಾರೆ, ಗೌರವಿಸುತ್ತಾರೆ ಕೂಡ.
ಗುಡಿಬಂಡೆ ತಾಲೂಕಿನ ಗವಿಗುಂಟಹಳ್ಳಿಯಲ್ಲಿ ಸುಮಾರು 45 ವರ್ಷಗಳಿಂದ ನೆಲೆಯೂರಿರುವ ಆಂಜಿನಪ್ಪನವರ ಹುಟ್ಟೂರು ಮಧುಗಿರಿ ತಾಲೂಕಿನ ಚಿಕ್ಕದಾಳವಾಟ. ತಿಮ್ಮಯ್ಯ ಮತ್ತು ತಿಮ್ಮಕ್ಕ ದಂಪತಿಯ ಮಗನಾಗಿ ಜನಿಸಿದ ಬಾಲಕ ತನ್ನ ಹಿರಿಯರಿಂದಲೇ ಮುಖವೇಣಿ ವಿದ್ಯೆಯನ್ನು ಕಲಿತ. ಎರಡನೆ ತರಗತಿಯಲ್ಲೇ ಶಾಲೆಗೆ ಚಕ್ಕರ್ ಹೊಡೆದ ಹುಡುಗ ತನ್ನ ಒಂಭತ್ತನೆ ವಯಸ್ಸಿಗೆಲ್ಲ ಮುಖವೇಣಿ ಯನ್ನು ಶ್ರದ್ಧೆಯಿಂದ ಕಲಿಯಲಾರಂಭಿಸಿದ. ಹದಿನಾಲ್ಕರ ವಯಸ್ಸಿಗೆಲ್ಲ ಈ ವಿದ್ಯೆಯನ್ನು ಕರಗತ ಮಾಡಿಕೊಂಡಮೇಲೆ ಚಿಕ್ಕದಾಳ ವಾಟದಲ್ಲಿ ಮನಸ್ಸು ನಿಲ್ಲಲಿಲ್ಲ. ಮುಖವೇಣಿ ಕೈಯಲ್ಲಿ ಹಿಡಿದುಕೊಂಡೇ ಕರ್ನಾಟಕದ ಬಳ್ಳಾರಿ, ಮಂಗಳೂರು-ಕೊಡಗು, ಆನಂತರ ಆಂಧ್ರ, ಕೇರಳ, ತಮಿಳುನಾಡು, ಗೋವಾ ಮುಂತಾದ ರಾಜ್ಯಗಳಲ್ಲಿ ಸಂಚರಿಸಿ ತನ್ನ ಕಲೆಯ ಜೊತೆ ಗಾಢ ಅನುಬಂಧ ಬೆಳೆಸಿಕೊಂಡ.
ಜನ್ಮತಃ ದಲಿತರಾದ (ಕೊರಚರು) ಆಂಜಿನಪ್ಪನವರು ಜನ ಸಾಮಾನ್ಯರ ಮಧ್ಯೆಯೇ ಹೆಚ್ಚು ಬೆರೆಯುತ್ತಿದ್ದ ಕಾರಣ ಕಲಾವಿದನ ಗತ್ತು, ಗಮ್ಮತ್ತು ತಲೆಗೆ ಏರಲಿಲ್ಲ. ದೊಡ್ಡ ವೇದಿಕೆಗಳನ್ನು ಹುಡುಕಿಕೊಂಡು ಹೋಗುವ ಬದಲು ಸಣ್ಣ ವೇದಿಕೆಗಳಲ್ಲಿಯೇ ಜನಸಾಮಾನ್ಯರ ಮಧ್ಯೆ ಅರಳಿದರು. ಅದರಿಂದಾಗಿ ಅವರಿಗೆ ಖ್ಯಾತಿಯ ಮಿಂಚಾಗಲಿ, ಹಣದ ಥೈಲಿಯಾಗಲಿ ಒಲಿಯದೇ ದೂರ ಉಳಿದುಬಿಟ್ಟಿತು. ಈ ಮಧ್ಯೆ ಮೀಸೆ ಬಲಿತ ಯುವಕನಾಗಿ ಊರಿಗೆ ಹಿಂದಿರುಗಿದ್ದರು. ಈ ಅಲೆದಾಟಕ್ಕೆ ವಿರಾಮ ಬೀಳಲೆಂದೇ ಹಿರಿಯರು ಹೆಣ್ಣೊಂದನ್ನು ಗಂಟು ಹಾಕಿದ್ದರು. ಆದರೆ ಚಕ್ರವಿದ್ದ ಕಾಲಿಗೆ ತಿರುಗಾಟವೇ ಪ್ರಿಯವಂತೆ! ಈಗ ಅಲೆದಾಟ ಕ್ಕೆ ಕೈ ಹಿಡಿದವಳೂ ಸಾಥಿಯಾದಳು. ಇಂಥ ತಿರುಗಾಟದ ಮಧ್ಯೆಯೇ ಸುಮಾರು 45 ವರ್ಷಗಳ ಹಿಂದೆ ಗವಿಗುಂಟಹಳ್ಳಿಗೆ ಬಂದವರು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಕೀರ್ತಿ ಕಲಸವಾಗಿ ಇಲ್ಲಿಯೇ ನೆಲೆಯೂರಿದ್ದಾರೆ.
ಆಂಜಿನಪ್ಪನವರ ಮುಖವೇಣಿ ವಾದನ ಒಂದು ವಿಶಿಷ್ಟ ಪ್ರಯೋಗ. ಮುಖವೇಣಿಯ ಜೊತೆಗೆ ಶೃತಿ ಮತ್ತು ಒತ್ತುಸ್ವರ ಸೇರಿ ಒಮ್ಮೆಲೆ ಮೂರು ವಾದನಗಳು ಅವರ ತುಟಿಗಳ ಮಧ್ಯೆ ಬಂಧಿಯಾಗುತ್ತವೆ. ಯಾವುದೇ ಪದವಾಗಿರಲಿ ಆರಂಭದಿಂದ ಅಂತ್ಯದವರೆಗೂ ಅವರ ಉಸಿರಿಗೆ ತಡೆ ಬೀಳುವುದಿಲ್ಲ. ಅವರ ಆಲಾಪನೆಯ ಏರಿಳಿತಗಳು ಅದ್ಭುತ! ಯಾವ ಕಾರಣಕ್ಕೂ ನಾದಸಿರಿ ಕ್ಷೀಣಗೊಳ್ಳುವುದಿಲ್ಲ. ಆಂಜಿನಪ್ಪನವರ ಸಂಗೀತ ಕಚೇರಿಯೆಂದರೆ ಎರಡೂಮೂರು ಗಂಟೆಗಳ ಕಾಲ ದಣಿವಿಲ್ಲದೆ ನಡೆ ಯುವುದುಂಟು. ನೆರೆರಾಜ್ಯಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಅಲ್ಲಿನ ದೇಸೀ ಭಾಷೆಯಲ್ಲಿಯೇ ನುಡಿಸಿ ಅವರ ಎದೆಗಳಲ್ಲಿ ಕನ್ನಡಿಗನ ಬಗ್ಗೆ ಬೆಚ್ಚನೆ ಭಾವ ಮೂಡಿಸಿದ್ದಾರೆ. ರಾಜಕುಮಾರ್, ವಿಷ್ಣುವರ್ಧನ್, ಶಿವಾಜಿ ಗಣೇಶನ್ ಮುಂತಾದ ಸಿನಿ ಕಲಾವಿದರ ಸಮ್ಮುಖದಲ್ಲಿ ಮುಖವೇಣಿ ನುಡಿಸಿ ಅವರ ಮನಸ್ಸನ್ನು ಗೆದ್ದಿರುವುದೂ ಹಿರಿಮೆ.
ಪ್ರಶಸ್ತಿಯ ಗರಿ
ಮೈಸೂರಿನಲ್ಲಿ ನಡೆದ ಅಖಿಲಭಾರತ ಜಾನಪದ ಸಮಾವೇಶದಲ್ಲಿ ಇವರಿಗೆ ‘ಜಾನಪದ ಪ್ರಶಸ್ತಿ’’ ನೀಡಿ ಗೌರವಿಸಲಾಗಿದೆ. ಕರ್ನಾಟಕ ರಾಜ್ಯ ‘‘ಜಾನಪದ ಮತ್ತು ಯಕ್ಷಗಾನ ಅಕಾಡಮಿ’’ ಪ್ರಶಸ್ತಿ ನೀಡಿ ಗುರುತಿಸಿದೆ. ಕೋಲಾರ ಜಿಲ್ಲೆಯ ‘‘ಡಾ.ಎಲ್.ಬಸವರಾಜು’’ ಪ್ರಶಸ್ತಿ ಯನ್ನು ನೀಡುವುದರ ಮೂಲಕ ಸಾರ್ಥಕ ಕೆಲಸವನ್ನೇ ಮಾಡಿದೆ. ಆದರೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇಂಥ ಅಪ್ಪಟ ದೇಸೀಕಲಾವಿದನ ಹತ್ತಿರ ಸುಳಿಯದಿರುವುದು ಮಾತ್ರ ಸೋಜಿಗ! ಈಗಲಾದರೂ ಸರಕಾರ ಈ ಹಾಡುಹಕ್ಕಿಗೆ ಒಂದು ಸ್ವಂತ ಗೂಡನ್ನು ಕಟ್ಟಿಸಿಕೊಟ್ಟು ಅದರ ಮೇಲೆ ರಾಜ್ಯೋತ್ಸವ ಪ್ರಶಸ್ತಿಯ ಗರಿಯನ್ನು ಸಿಕ್ಕಿಸಲು ಪ್ರಯತ್ನಿಸಬೇಕಿದೆ.
ಹಕ್ಕಿ ದನಿಬಿಚ್ಚಿ ಇನ್ನೊಂದಷ್ಟು ದಿನ ಹಾಡುತ್ತಿರಲು ಅದರ ಬದುಕಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವತ್ತಲೂ ಯೋಚಿಸಬೇಕಾಗಿದೆ. ಆಂಜಿನಪ್ಪನವರು ಮುಖವೇಣಿಯನ್ನು ಮೂಗಿನ ಎರಡು ಹೊಳ್ಳೆಗಳ ಮೂಲಕವೂ ನುಡಿಸುತ್ತಾರೆ!. ಆಗೆಲ್ಲ ಥೇಟ್ ಕೊಳಲಿನ ಆಲಾಪನೆ ಹರಿದು ಬರುತ್ತದೆ. ವಿಶೇಷವೆಂದರೆ ಬಾಯಿಯಿಂದ ಮುಖವೇಣಿಯನ್ನು ನುಡಿಸುತ್ತಿರುವಾಗ ಕೊಳವೆಯ ಮೂಲಕ ಮೂಗಿನ ಒಂದು ಹೊಳ್ಳೆಗೆ ನೀರನ್ನು ಒಳಗೆ ಹೊಯ್ಯಿಸಿ ಕೊಂಡು ಮತ್ತೊಂದು ಹೊಳ್ಳೆಯಿಂದ ಆ ನೀರನ್ನು ಹೊರಬಿಡುವ ಚಮತ್ಕಾರ ಮೈನವಿರೇಳಿಸುತ್ತದೆ. ಜಲವಾದ್ಯ, ಪಂಚವಾದ್ಯ ಎಂದೆಲ್ಲಾ ಕರೆಯಲಾಗುವ ಈ ಅಪಾಯಕಾರಿ ಪ್ರದರ್ಶನವನ್ನು ಜನ ಬಹಳವೇ ಇಷ್ಟಪಡುತ್ತಾರೆ.
ಆಂಜಿನಪ್ಪನವರು ಈ ತಲೆಮಾರಿನ ಅಪರೂಪದ ಕಲಾವಿದರು. ಇವರಿಗೆ ಆರು ಜನ ಗಂಡು ಮಕ್ಕಳಿದ್ದರೂ ಈ ಕಲೆಯ ಬಗ್ಗೆ ಯಾರೊಬ್ಬರೂ ಆಸಕ್ತಿ ತೋರದಿ ರುವುದು ವರ್ತಮಾನದ ದುರಂತ. ಈ ಕಲೆಯನ್ನು ನಂಬಿಕೊಂಡರೆ ಬದುಕು ನೆಲೆ ಕಾಣಲಾರದೆಂಬ ಅಳಕು ಅವರಿಗೆ. ಇದು ಅವರ ಅನುಭವವೂ ಕೂಡ. ಏಕೆಂದರೆ ಇಂಥ ಅದ್ಭುತ ಕಲಾವಿದನ ಬದುಕಿನ ಆಸರೆಗೆ ಗವಿಗುಂಟಹಳ್ಳಿಯಲ್ಲಿ ಒಂದು ಸ್ವಂತ ಸೂರಿಲ್ಲ. ಸರಕಾರ ಅಲೆಮಾರಿಗಳಿಗಾಗಿ ಕಟ್ಟಿಸಿರುವ ಐದು ಗುಂಪುಮನೆಗಳ ಪೈಕಿ ಒಂದರಲ್ಲಿ ಇವರು ತಲೆಮರೆಸಿಕೊಂಡಿದ್ದಾರೆ. ಬಡತನಕ್ಕೆ ರೋಸಿ ತಲೆಯ ಮೇಲಿನ ರುಮಾಲನ್ನು ನೆಲದ ಮೇಲೆ ಹಾಸಿ ಮುಖವೇಣಿಯನ್ನು ನುಡಿಸಲು ಅವರಿಗೆ ಅಭಿಮಾನದ ಅಡ್ಡಿ. ಸರಕಾರದ ಕಾರ್ಯಕ್ರಮಗಳಿಗಾಗಿ ಕೈಚಾಚಿ ಅಂಗಲಾಚುವ ಜಾಯಮಾನವೂ ಅವರದಲ್ಲ.







