ಜೂ.21ರ ಯೋಗ ದಿನಾಚರಣೆಗೆ ಭರದ ಸಿದ್ಧತೆ
5320 ಮಂದಿಗೆ ಯೋಗ ತರಬೇತಿ

ಮಂಗಳೂರು, ಜೂ.18: ಜಿಲ್ಲಾಡಳಿತ ಮತ್ತು ಆಯುಷ್ ಇಲಾಖೆಯ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ಜೂ.21ರಂದು ನಗರದ ಪುರಭವನದ ನೂತನ ಸಭಾಂಗಣ, ಸರಕಾರಿ ನೌಕರರ ಸಭಾಭವನ ಹಾಗೂ ಕಾರ್‌ಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೀಗೆ 3 ಕಡೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದೆ.
ಮುಖ್ಯ ಕಾರ್ಯಕ್ರಮವು 21ರಂದು ಬೆಳಗ್ಗೆ 8 ಗಂಟೆಗೆ ಪುರಭವನದ ನೂತನ ಸಭಾಂಗಣದಲ್ಲಿ ಜರಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಲಿದ್ದಾರೆ. ಈ ಕುರಿತು ಪೂರ್ವಭಾವಿ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಅಪರ ಜಿಲ್ಲಾಧಿಕಾರಿ ಕುಮಾರ್ ಮಾತನಾಡಿ, ಯೋಗ ದಿನಾಚರಣೆ ಯಶಸ್ವಿಗಾಗಿ ಒಂದು ತಿಂಗಳಿಂದ ಜಿಲ್ಲಾದ್ಯಂತ ವಿವಿಧೆಡೆ ತರಬೇತಿ ಶಿಬಿರಗಳು ಜರಗುತ್ತಿವೆ. ಯೋಗ ಕಾರ್ಯಕ್ರಮದಲ್ಲಿ 1,000 ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಾರ್ವಜನಿಕರು ಕೂಡ ಭಾಗವಹಿಸಲು ಮುಕ್ತ ಅವಕಾಶವಿದೆ. ಒಟ್ಟು 5320 ಜನರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.
ಯೋಗಗುರು ಗೋಪಾಲಕೃಷ್ಣ ದೇಲಂಪಾಡಿ ಮಾತನಾಡಿ, ಭಾರತೀಯ ವೈದ್ಯಪದ್ಧತಿಗಳಲ್ಲೊಂದಾದ ‘ಯೋಗ’ ಇಂದು ವಿಶ್ವದಾದ್ಯಂತ ಕ್ಷಿಪ್ರಗತಿಯಲ್ಲಿ ಜನಪ್ರಿಯಗೊಳ್ಳುತ್ತಿರುವ ಜೀವನ ಪದ್ಧತಿಯಾಗಿದೆ. ಆರೋಗ್ಯಪೂರ್ಣ ಜೀವನಕ್ಕೆ ರೋಗಮುಕ್ತ ಶರೀರದ ಜೊತೆಗೆ ಆತ್ಮ ಇಂದ್ರಿಯ ಮನಸ್ಸುಗಳ ಪ್ರಸನ್ನತೆ ಕೂಡಾ ಅತ್ಯಗತ್ಯ. ಈ ದೃಷ್ಟಿಯಿಂದ ಭಾರತದ ಸಂಪದ್ಭರಿತವಾದ ಯೋಗ ವಿದ್ಯೆ ಇಂದು ಜನಮಾನಸದಲ್ಲಿ ಆಶಾಕಿರಣ ಮೂಡಿಸುತ್ತಿದೆ ಎಂದರು.
ಈ ಸಂದರ್ಭ ಯೋಗ ದಿನಾಚರಣೆಯ ಯೋಗಾಸನಗಳ ಚಿತ್ರ ಸಹಿತ ಪಟ್ಟಿಯನ್ನು ಅಪರ ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್, ಎಸ್‌ಡಿಎಂ ಕಾಲೇಜಿನ ಡೀನ್ ಡಾ. ಶಿವಪ್ರಸಾದ್ ಶೆಟ್ಟಿ, ಡಾ. ದೇವದಾಸ್ ಮತ್ತಿತರರು ಉಪಸ್ಥಿತರಿದ್ದರು.







