ಶುಲ್ಕ ತುಂಬದ್ದಕ್ಕಾಗಿ ಸೋದರಿಯರ ಬಟ್ಟೆ ಬಿಚ್ಚಿಸಿದ ಬಿಹಾರದ ಶಾಲೆ

ಪಾಟ್ನಾ,ಜೂ.18: ಶಾಲಾ ಶುಲ್ಕವನ್ನು ಪಾವತಿಸಲು ವಿಫಲವಾಗಿದ್ದಕ್ಕೆ ಖಾಸಗಿ ಶಾಲೆ ಯೊಂದರ ಆಡಳಿತ ವರ್ಗ ಇಬ್ಬರು ಎಳೆಯ ಬಾಲಕಿಯರ ಸಮವಸ್ತ್ರವನ್ನು ಬಿಚ್ಚಿಸಿ ಅರೆಬೆತ್ತಲೆ ಸ್ಥಿತಿಯಲ್ಲಿ ಬಲವಂತದಿಂದ ಮನೆಗೆ ಕಳುಹಿಸಿದ ಹೇಯ ಘಟನೆ ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಈ ಸೋದರಿಯರು ಅವಮಾನಿತರಾಗಿ ಗ್ರಾಮದ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯಗಳು ವೀಡಿಯೊದಲ್ಲಿ ದಾಖಲಾಗಿವೆ. ಮಾರ್ಗಮಧ್ಯ ವ್ಯಕ್ತಿಯೋರ್ವ ಅವರನ್ನು ತನ್ನ ಮನೆಗೆ ಕರೆದೊಯ್ದು ಮೈಮುಚ್ಚಿಕೊಳ್ಳಲು ಬಟ್ಟೆಯನ್ನು ನೀಡಿ ಮಾನವೀ ಯತೆ ಪ್ರದರ್ಶಿಸಿದ್ದಾನೆ. ಈ ಸೋದರಿಯರ ಪೈಕಿ ಕಿರಿಯವಳು ನರ್ಸರಿಯಲ್ಲಿದ್ದರೆ, ಹಿರಿಯವಳು ಮೊದಲ ತರಗತಿಯಲ್ಲಿ ಓದುತ್ತಿದ್ದಾಳೆ.
ಬಾಲಕಿಯರು ಬಡಕುಟುಂಬಕ್ಕೆ ಸೇರಿದ್ದು ಅವರು ಉತ್ತಮ ಶಿಕ್ಷಣ ಪಡೆಯಬೇಕೆಂದು ಹೆತ್ತವರು ಬಯಸಿದ್ದರು. ಆದರೆ ಈ ಬಾರಿ ಮಕ್ಕಳ ತಂದೆ ಚುನ್‌ಚುನ್ ಶಾ ಗಡುವಿ ನೊಳಗೆ ಸಮವಸ್ತ್ರದ ಹಣ ಮತ್ತು ಶಾಲಾಶುಲ್ಕವನ್ನು ಪಾವತಿಸಲು ವಿಫಲನಾಗಿದ್ದ. ಆತ ಸ್ವಲ್ಪ ಹೆಚ್ಚಿನ ಸಮಯಾವಕಾಶವನ್ನು ಕೋರಿದ್ದನಾದರೂ ಖಾಸಗಿ ಶಾಲೆಯು ಅದನ್ನು ತಿರಸ್ಕರಿಸಿತ್ತು.
ಶಾ ನೀಡಿರುವ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.







