ಅಕ್ಕಿ,ಸಕ್ಕರೆಗಳಲ್ಲಿ ಪ್ಲಾಸ್ಟಿಕ್; 168 ಸ್ಯಾಂಪಲ್ ಸಂಗ್ರಹಿಸಿದ ಕೇರಳ ಆಹಾರ ಸುರಕ್ಷಾ ವಿಭಾಗ

ತಿರುವನಂತಪುರಂ,ಜೂ. 18: ಅಕ್ಕಿ, ಸಕ್ಕರೆಗಳಲ್ಲಿ ಪ್ಲಾಸ್ಟಿಕ್ ಮಿಶ್ರಣವಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷಾ ವಿಭಾಗ 168 ಮಾದರಿಗಳನ್ನು ಸಂಗ್ರಹಿಸಿದೆ. ಜೂನ್ 15ರಿಂದ ತಪಾಸಣೆ ಆರಂಭಿಸಲಾಗಿದ್ದು, ರವಿವಾರದವರೆಗೆ ಮುಂದುವರಿಯಲಿದೆ. ಕಳೆದ ಮೂರು ದಿವಸಗಳಲ್ಲಿ ರಾಜ್ಯದಲ್ಲಿ 267 ಅಂಗಡಿಗಳಲ್ಲಿ ತಪಾಸಣೆ ನಡೆಸಲಾಗಿದೆ.
55 ಅಂಗಡಿಗಳಿಗೆ ನವೀಕರಣ ಇತ್ಯಾದಿ ಕಾರಣಗಳಲ್ಲಿ ನೋಟಿಸ್ ನೀಡಲಾಗಿದೆ. ಇವರಲ್ಲಿ 81,000 ರೂಪಾಯಿ ದಂಡ ವಿಧಿಸಿದೆ. ಶುಚಿರಹಿತ ಸ್ಥಳದಲ್ಲಿ ಅಕ್ಕಿ ಮತ್ತು ಸಕ್ಕರೆಯನ್ನು ಸ್ಟಾಕ್ ಇರಿಸಿದ, ಆಹಾರ ಸುರಕ್ಷಾ ಮಾನದಂಡಗಳನ್ನು ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ.
ಪ್ಲಾಸ್ಟಿಕ್ ಇದೆಯೇ ಇಲ್ಲವೇ ಎಂದು ಪರೀಕ್ಷಿಸಲು ಸಂಗ್ರಹಿಸಲಾದ ಮಾದರಿಗಳನ್ನು ಕಳುಹಿಸಲಾಗಿದ್ದು, ಫಲಿತಾಂಶ ಸಿಕ್ಕಿದ ಬಳಿಕವೇ ದೃಢವಾಗಿ ಹೇಳಲು ಸಾಧ್ಯವೆಂದು ಆಹಾರ ಭದ್ರತಾ ಕಮಿಶನರ್ ಡಾ. ನವಜೋತ್ ಖೋಸ ಹೇಳಿದರು. ಅಕ್ಕಿ ಉತ್ಪಾದನ ಕೇಂದ್ರಗಳಿಗೆ, ದಾಸ್ತಾನು ಇಡುವ ಸ್ಥಳಗಳಿಗೆ , ಸಗಟು ಮಾರಾಟಗಾರರು, ಪ್ಯಾಕಿಂಗ್ ಕೇಂದ್ರಗಳಿಗೆ ಮತ್ತು ಸಾರ್ವಜನಿಕರು ಅಕ್ಕಿ,ಸಕ್ಕರೆ ಖರೀದಿಸುವ ಅಂಗಡಿಗಳಿಗೆ ಆಹಾರ ಸುರಕ್ಷಾ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ಮಾಡಿದ್ದಾರೆ.





