ಜನೌಷಧಿ ಯೋಜನೆ ಅತ್ಯಂತ ಉಪಯುಕ್ತ : ಡಾ. ಎಂ.ಜಿ.ಪಾಟ್ಕರ್

ಮಡಿಕೇರಿ ಜೂ.18: ಆರ್ಥಿಕವಾಗಿ ಹಿಂದುಳಿದ ಬಡವರ್ಗದ ಉದ್ಧಾರವಾಗಬೇಕಾದರೆ ಅವರ ಆರೋಗ್ಯದ ಸಂರಕ್ಷಣೆಗೆ ಅತ್ಯವಶ್ಯವಾಗಿ ಬೇಕಾಗಿರುವ ಔಷಧಿಗಳು ಕಡಿಮೆ ವೆಚ್ಚದಲ್ಲಿ ದೊರಕುವಂತಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನೌಷಧಿ ಯೋಜನೆ ಅತ್ಯಂತ ಉಪಯುಕ್ತವಾದುದೆಂದು ಬಿಜೆಪಿಯ ಹಿರಿಯ ಮುಖಂಡರು ಹಾಗೂ ಪ್ರಸಿದ್ಧ ವೃದ್ಯರಾದ ಡಾ ಎಂ.ಜಿ. ಪಾಟ್ಕರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬಿಜೆಪಿಯ ವೈದ್ಯಕೀಯ ಪ್ರಕೋಷ್ಠದಿಂದ ಆಯೋಜಿತ ಜನೌಷಧಿ ಕುರಿತ ಅರಿವು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಯಿಂದ ಬಳಲುವವರಲ್ಲಿ ಶೇ.80 ರಷ್ಟು ಮಂದಿ ಕೂಲಿ ಕಾರ್ಮಿಕರು, ಹಿರಿಯ ನಾಗರಿಕರು, ಮಹಿಳೆಯರೇ ಆಗಿದ್ದಾರೆ. ಇವರೆಲ್ಲರೂ ಬದುಕಿಗೆ ಪೂರಕವಾದ ಆದಾಯವಿಲ್ಲದೆ ಹಣದ ಸಮಸ್ಯೆಯನ್ನು ಎದುರಿಸುವಂತವರೇ ಆಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜದಲ್ಲಿ ಬಹುತೇಕ ತಂದೆ ತಾಯಂದಿರು ತಮ್ಮ ಬದುಕಿಗೆ ಮಕ್ಕಳನ್ನೆ ಅವಲಂಬಿತರಾಗಿದ್ದಾರೆ. ಸಾಕಷ್ಟು ಮಂದಿ ತಾವು ಪಡೆಯುವ ಮಾಸಿಕ ಪಿಂಚಣಿಯ ಬಹುಪಾಲನ್ನು ವೈದ್ಯಕೀಯ ವೆಚ್ಚಕ್ಕಾಗಿ ಬಳಸಲೇ ಬೇಕಾದ ಅನಿವಾರ್ಯತೆಯನ್ನು ಹೊಂದಿದ್ದಾರೆ ಎಂದು ನೋವಿನಿಂದ ನುಡಿದರು. ವೈದ್ಯಕೀಯ ಸೇವೆಯನ್ನು ಹಣಗಳಿಕೆಯ ವೃತ್ತಿಯನ್ನಾಗಿ ಕಾಣದೆ ಸೇವಾ ಕ್ಷೇತ್ರವನ್ನಾಗಿ ಪರಿಗಣಿಸಿ ಜನ ಸಾಮಾನ್ಯರಿಗೆ ಆರೋಗ್ಯ ಸೇವೆ ಒದಗಿಸುವುದು ಅಗತ್ಯವೆಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಯೋಗ್ಯ ರೀತಿಯಲ್ಲಿ ಕಡಿಮೆ ದರದಲ್ಲಿ ದೊರಕಬೇಕೆನ್ನುವ ಸದುದ್ದೇಶದಿಂದ ಜನೌಷಧಿ ಯೋಜನೆ ಜಾರಿಗೆ ತರಲಾಗಿದೆ. ರಾಷ್ಟ್ರ ಅಭಿವೃದ್ಧಿಯನ್ನು ಕಾಣಬೇಕಾದಲ್ಲಿ ರಾಷ್ಟ್ರದ ಜನತೆ ಆರೋಗ್ಯವಂತರಾಗಿರುವುದು ಅಷ್ಟೇ ಮುಖ್ಯವೆಂದರು. ಸರ್ಕಾರದ ಯಾವುದೇ ಜನಪರ ಯೋಜನೆಗಳು ಫಲಪ್ರದವಾಗಬೇಕಾದಲ್ಲಿ ಅದರ ಜವಾಬ್ದಾರಿ ಹೊತ್ತವರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ, ಜೌಷಧಿ ತಯಾರಕರು, ವಿತರಕರ ವಿಚಾರಗಳಷ್ಟೆ ವ್ಯವಸ್ಥೆಯಲ್ಲಿ ಚರ್ಚೆಗೊಳಪಡುತ್ತ. ಆದರೆ, ಜನಸಾಮಾನ್ಯರ ಹಿತದ ಬಗ್ಗೆ ಯಾರೂ ಚಿಂತಿಸುತ್ತಿಲ್ಲ. ಪ್ರಸ್ತುತ ರಾಷ್ಟ್ರದ 125 ಕೋಟಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಆರಂಭವಾಗಿರುವ ಜನೌಷಧಿ ಯೋಜನೆಯನ್ನು 26 ಸಾವಿರ ವರ್ತಕರ ದೃಷ್ಟಿಯಿಂದ ಕೈಬಿಡುವುದು ತಪ್ಪಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ಆರೋಗ್ಯ ಸೇವೆಯ ಹೆಸರಿನಲ್ಲಿ ನಡೆಯುತ್ತಿರುವ ಲೈಸನ್ಸ್ಡ್ ವೈದ್ಯಕೀಯ ದರೋಡೆಯನ್ನು ನಿಯಂತ್ರಿಸುವ ಬಗ್ಗೆ ಸರಕಾರಗಳು ಚಿಂತಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾದ ಡಾ ನವೀನ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಬಾರತೀಶ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪ, ಮಾಜಿ ಎಂಎಲ್‌ಸಿ ಎಸ್.ಜಿ.ಮೇದಪ್ಪ, ಡಾ ಸಂತೋಷ್ ಮಾತನಾಡಿದರು. ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ ಸ್ವಾಗತಿಸಿ, ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.







