ಯುವ ಕಾಂಗ್ರೆಸ್‌ನಿಂದ ಪರಿಸರ ಜಾಗೃತಿ: ಪರಿಸರ ರಕ್ಷಣೆಗೆ ಪದ್ಮಿನಿ ಪೊನ್ನಪ್ಪ ಕರೆ

ಮಡಿಕೇರಿ ಜೂ.18 : ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಮೂಲಕ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದುಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸಿದ್ದಾಪುರ ಪಟ್ಟಣದಲ್ಲಿ ನಡೆದ ಪರಿಸರ ಜಾಗೃತಿ ಜಾಥಾಮತ್ತು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅರಣ್ಯ ನಾಶ ಹಾಗೂ ಪರಿಸರ ನಾಶದಿಂದಾಗಿ ಮುಂದಿನ ಪೀಳಿಗೆಗೆ ತೊಂದರೆಯಾಗಲಿದ್ದು, ಮರ ಕಡಿಯುವ ಸಂದರ್ಭ ದುಪ್ಪಟ್ಟು ಗಿಡಗಳನ್ನು ನೆಡಬೇಕೆಂದು ಕರೆ ನೀಡಿದರು. ವನಮಹೋತ್ಸವ ಆಚರಣೆಯಲ್ಲಿ ಯುವ ಪೀಳಿಗೆಗೆ ಮಾಹಿತಿ ನೀಡುವುದರೊಂದಿಗೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿಯುವ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಕಳಕಳಿಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನಾರ್ಹವೆಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಾರ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿಜಿಲ್ಲೆಯಲ್ಲಿ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ, ಗಿಡಗಳನ್ನು ನೆಡುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಹೆಜ್ಜೆ ಇಟ್ಟಿರುವುದು ಶ್ಲಾಘನೀಯವೆಂದರು.ರಾಜ್ಯ ಸರಕಾರದಿಂದ ಈಗಾಗಲೇ 5 ಕೋಟಿ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಗಿಡವನ್ನು ನೆಡುವುದರೊಂದಿಗೆ ಅದನ್ನು ಪೋಷಿಸಿ ಬೆಳಸಬೇಕು ಎಂದು ಕಿವಿಮಾತು ಹೇಳಿದರು.
ಇದಕ್ಕೂ ಮೊದಲು ಹಳೇ ಸಿದ್ದಾಪುರದಿಂದ ಆರಂಭವಾದ ಪರಿಸರ ಸಂರಕ್ಷಣಾ ಜಾಥಾಕ್ಕೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಉಸ್ಮಾನ್ ಹಾಜಿ ಚಾಲನೆ ನೀಡಿದರು. ಸಿದ್ದಾಪುರ ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಮುಖಂಡರು ಪರಿಸರ ರಕ್ಷಿಸುವ ಹಾಗೂ ಮರಗಳನ್ನು ಬೆಳೆಸುವ ಬಗ್ಗೆ ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ಬಳಿಕ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ತೋರಿದರು.
ಈ ಸಂಧರ್ಭ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಮಾಚಯ್ಯ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹನೀಫ್ ಸಂಪಾಜೆ, ಪ್ರಧಾನ ಕಾರ್ಯದರ್ಶಿ ಶಾಫಿಕೊಟ್ಟಮುಡಿ, ಕಾರ್ಮಿಕ ಘಟಕದ ಪ್ರಮುಖರಾದ ವಿ.ಪಿ.ಶಶಿಧರ್, ಜಿ.ಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಆರ್.ಕೆ.ಸಲಾಂ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.







