ಪ್ಲಾಸ್ಟಿಕ್ ಬಾಟ್ಲಿಗಳಲ್ಲಿ ಔಷಧಿಗಳು ಸುರಕ್ಷಿತವೇ ಎನ್ನುವುದನ್ನು ಕಂಡುಕೊಳ್ಳಲು ಸರಕಾರದ ಸೂಚನೆ

ಹೊಸದಿಲ್ಲಿ,ಜೂ.18: ಪ್ಲಾಸ್ಟಿಕ್ ಬಾಟ್ಲಿಗಳು ಕರಗುವ ಮೂಲಕ ಅವುಗಳಲ್ಲಿನ ಔಷಧಿ ಗಳು ಕಲುಷಿತಗೊಳ್ಳುತ್ತವೆಯೇ ಎಂಬ ಬಗ್ಗೆ ವಿವರವಾದ ಅಧ್ಯಯನವೊಂದನ್ನು ಕೈಗೊಳ್ಳುವಂತೆ ಕೇಂದ್ರವು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಗೆ ಸೂಚಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಎರಡು ವರ್ಷಗಳ ಹಿಂದೆ ಸಿದ್ಧಗೊಳಿಸಿದ್ದ ಕರಡು ನಿರ್ದೇಶನವು ಪ್ರಬಲ ಔಷಧಿಗಳನ್ನು ದಾಸ್ತಾನಿರಿಸಲು ಪ್ಲಾಸ್ಟಿಕ್ ಮತ್ತು ಪೆಟ್ ಬಾಟ್ಲಿಗಳ ಬದಲಾಗಿ ಗಾಜಿನ ಬಾಟ್ಲಿಗಳನ್ನು ಬಳಸಬೇಕೆಂಬ ಪ್ರಸ್ತಾವವನ್ನು ಹೊಂದಿತ್ತು.
ಕೆಮ್ಮಿನ ಸಿರಪ್‌ಗಳು ಮತ್ತು ಇತರ ದ್ರವ ಔಷಧಿಗಳ ಪ್ಲಾಸ್ಟಿಕ್ ಬಾಟ್ಲಿಗಳಲ್ಲಿ ಸೀಸ ಸೇರಿದಂತೆ ವಿಷಕಾರಿ ವಸ್ತುಗಳನ್ನು ಕಳೆದ ವರ್ಷ ಸರಕಾರದ ಅಧ್ಯಯನವೊಂದು ಪತ್ತೆ ಹಚ್ಚಿತ್ತು. ಇಂತಹ ಬಾಟ್ಲಿಗಳಿಂದ ಹಾನಿಕಾರಕ ವಸ್ತುಗಳು ಬಿಡುಗಡೆಯಾಗುತ್ತವೆ ಎಂಬ ತೀರ್ಮಾನಕ್ಕೆ ಬಂದಿದ್ದ ಅದು, ಔಷಧಿಗಳಿಗೆ ಇಂತಹ ಬಾಟ್ಲಿಗಳ ಬಳಕೆಯನ್ನು ನಿಷೇಧಿಸು ವಂತೆ ಸೂಚಿಸಿತ್ತು. ಔಷಧಿಗಳ ಗುಣಮಟ್ಟವನ್ನು ನಿರ್ಧರಿಸುವ ದೇಶದ ಅತ್ಯುನ್ನತ ಶಾಸನಬದ್ಧ ಪ್ರಾಧಿಕಾರವಾಗಿರುವ ಔಷಧಿಗಳ ತಾಂತ್ರಿಕ ಸಲಹಾ ಮಂಡಳಿ(ಡಿಟಿಎಬಿ) ಯು ಈ ಅಧ್ಯಯನ ವರದಿಗೆ ತನ್ನ ಸಹಮತವನ್ನು ವ್ಯಕ್ತಪಡಿಸಿತ್ತು ಎಂದು ಸಚಿವಾಲಯದ ಮೂಲವೊಂದು ತಿಳಿಸಿದೆ.
2016,ಮೇ ತಿಂಗಳಿನಲ್ಲಿ ಸಲ್ಲಿಸಲಾಗಿದ್ದ ಅಖಿಲ ಭಾರತ ನೈರ್ಮಲ್ಯ ಮತ್ತು ಜನಾರೋಗ್ಯ ಸಂಸ್ಥೆಯ ಈ ಅಧ್ಯಯನ ವರದಿಯು ಅದೇ ವರ್ಷದ ಮಾರ್ಚ್‌ನಲ್ಲಿ ಮಾಜಿ ಜೈವಿಕ ತಂತ್ರಜ್ಞಾನ ಕಾರ್ಯದರ್ಶಿ ಎಂ.ಕೆ.ಭಾನ್ ನೇತೃತ್ವದ ಇನ್ನೊಂದು ತಜ್ಞರ ಸಮಿತಿಯು ಸಲ್ಲಿಸಿದ್ದ ವರದಿಗೆ ವ್ಯತಿರಿಕ್ತವಾಗಿದೆ. ಪೆಟ್ ಬಾಟ್ಲಿಗಳಲ್ಲಿನ ಔಷಧಿಗಳು ಬಾಟ್ಲಿಯ ಕರಗುವಿಕೆಯಿಂದ ಕಲುಷಿತಗೊಳ್ಳುತ್ತವೆ ಎಂಬ ಬಗ್ಗೆ ಯಾವುದೇ ಸಾಕ್ಷಾಧಾರ ವಿಲ್ಲ ಎಂದು ಭಾನ್ ಸಮಿತಿಯು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿತ್ತು.
ತಾನು ಪರೀಕ್ಷೆಗೊಳಪಡಿಸಿದ್ದ ಐದು ಔಷಧಿಗಳಲ್ಲಿ ಪ್ಲಾಸ್ಟಿಕ್ ಬಾಟ್ಲಿಯು ಕರಗಿ ಬಿಡುಗಡೆಯಾಗಿದ್ದ ನಾಲ್ಕು ಭಾರಲೋಹಗಳಾದ ಸೀಸ,ಆ್ಯಂಟಿಮನಿ,ಡಿಇಎಚ್‌ಪಿ ಮತ್ತು ಕ್ರೋಮಿಯಂ ಅಂಶಗಳು ಪತ್ತೆಯಾಗಿವೆ ಎಂದು ಮೇ,2016ರ ವರದಿಯು ತಿಳಿಸಿತ್ತು.
ಈ ಬಗ್ಗೆ ಅಧ್ಯಯನ ನಡೆಸುವ ಹೊಣೆಯನ್ನು ಐಸಿಎಂಆರ್ ಹೈದರಾಬಾದ್‌ನ ರಾಷ್ಟ್ರೀಯ ಪೋಷಕಾಂಶ ಸಂಸ್ಥೆಗೆ ಒಪ್ಪಿಸಿದೆ.







