7 ನಾವಿಕರ ಶವ ನೀರು ತುಂಬಿದ ಕಂಪಾರ್ಟ್‌ಮೆಂಟ್‌ಗಳಲ್ಲಿ ಪತ್ತೆ

ಯೊಕೊಸುಕ (ಜಪಾನ್), ಜೂ. 18: ಅಮೆರಿಕದ ಯುದ್ಧ ನೌಕೆ ‘ಯುಎಸ್‌ಎಸ್ ಫಿಜರಾಲ್ಡ್’, ಕಂಟೇನರ್ ಹಡಗೊಂದಕ್ಕೆ ಢಿಕ್ಕಿಯಾದ ಬಳಿಕ ನಾಪತ್ತೆಯಾಗಿದ್ದ ಅದರ (ಯುದ್ಧನೌಕೆಯ) ಹಲವಾರು ನಾವಿಕರ ಶವಗಳು ಜರ್ಝರಿತ ಹಡಗಿನ ನೀರು ತುಂಬಿದ ಕಂಪಾರ್ಟ್‌ಮೆಂಟ್‌ಗಳಲ್ಲಿ ಪತ್ತೆಯಾಗಿವೆ ಎಂದು ಯುಎಸ್ ಸೆವೆಂತ್ ಫ್ಲೀಟ್ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಢಿಕ್ಕಿಯ ಬಳಿಕ ನಾಪತ್ತೆಯಾಗಿದ್ದ ಎಲ್ಲ ಏಳು ನಾವಿಕರು ಶವವಾಗಿ ಪತ್ತೆಯಾಗಿದ್ದಾರೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ನಾವಿಕರನ್ನು ಅಮೆರಿಕದ ನೌಕಾ ಪಡೆ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಹಾಗೂ ಅಲ್ಲಿ ಅವರ ಗುರುತು ಪತ್ತೆಹಚ್ಚಲಾಗುವುದು ಎಂದು ಸೆವೆಂತ್ ಫ್ಲೀಟ್ ತಿಳಿಸಿದೆ.
ಯುಎಸ್‌ಎಸ್ ಫಿಜರಾಲ್ಡ್ ಫಿಲಿಪ್ಪೀನ್ಸ್‌ನ ವ್ಯಾಪಾರಿ ಹಡಗು ಎಸಿಎಕ್ಸ್ ಕ್ರಿಸ್ಟಲ್‌ಗೆ ಯೊಕೊಸುಕದಿಂದ 56 ನಾಟಿಕಲ್ ಮೈಲಿ ದೂರದಲ್ಲಿ ಶನಿವಾರ ಮುಂಜಾನೆ ಢಿಕ್ಕಿಯಾಗಿತ್ತು.
ಢಿಕ್ಕಿಯ ಬಳಿಕ ಮೂವರನ್ನು ಯೊಕೊಸುಕದಲ್ಲಿರುವ ಅಮೆರಿಕ ನೌಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಯುಎಸ್‌ಎಸ್ ಫಿಜರಾಲ್ಡ್ ನೌಕೆಯನ್ನು ಶನಿವಾರ ಸಂಜೆಯ ವೇಳೆಗೆ ಬಂದರಿಗೆ ತರಲಾಗಿದೆ.
ಈ ನಡುವೆ, ಅಮೆರಿಕ ಮತ್ತು ಜಪಾನ್‌ನ ವಿಮಾನ ಮತ್ತು ನೌಕೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದವು ಎಂದು ನೌಕಾಪಡೆ ತಿಳಿಸಿದೆ.







